ಪ್ರಸ್ತುತ ರಾಜ್ಯದಲ್ಲಿ ಸ್ಪಾ ಮತ್ತು ಮಸಾಜ್ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನೇರವಾಗಿ ನಿಯಂತ್ರಿಸುವ ಸ್ಪಷ್ಟ ಕಾನೂನು ಇಲ್ಲ. ಈ ಹಿನ್ನೆಲೆಯಲ್ಲಿ ಆಯೋಗವು ದೇಶ-ವಿದೇಶಗಳ ಕಾನೂನು ಮಾದರಿಗಳನ್ನು ಅಧ್ಯಯನ ನಡೆಸಿದ್ದು, ವಿಶೇಷವಾಗಿ ಸಿಂಗಾಪುರ್, ಅಮೆರಿಕದ ಹಲವು ರಾಜ್ಯಗಳು ಹಾಗೂ ಫಿಲಿಪ್ಪೀನ್ಸ್‌ನಲ್ಲಿ ಜಾರಿಯಲ್ಲಿರುವ ನಿಯಮಾವಳಿಗಳನ್ನು ಪರಿಶೀಲಿಸಿದೆ. ಕಾನೂನು ಆಯೋಗವು 2024ರ ಕಾಯಿದೆಯೊಂದಕ್ಕೆ ತಿದ್ದುಪಡಿ ತಂದು, ಆಯುರ್ವೇದ ಆರೋಗ್ಯ ಕೇಂದ್ರಗಳು, ಸ್ಪಾ, ಯುನಿಸೆಕ್ಸ್ ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು ಮತ್ತು ಜಿಮ್‌ಗಳಿಗೆ ಕಡ್ಡಾಯ ಪರವಾನಗಿ ವ್ಯವಸ್ಥೆ ಜಾರಿಗೆ ತರಲು ಶಿಫಾರಸು ಮಾಡಿದೆ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದರೆ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಹಾಗೂ ಮರು ಉಲ್ಲಂಘನೆಯಾದರೆ ಪರವಾನಗಿಯನ್ನು ರದ್ದುಪಡಿಸುವ ಅಧಿಕಾರವನ್ನು ಸ್ಥಳೀಯಾಡಳಿತಕ್ಕೆ ನೀಡುವಂತೆ ಸಲಹೆ ನೀಡಲಾಗಿದೆ.