ದರ್ಶನ್‌ಗೆ ವಿಶೇಷ ಸೌಲಭ್ಯ; ಎಲ್ಲ ಆಯಾಮಗಳಲ್ಲೂ ತನಿಖೆ

Parameswar
Published on

ಬೆಂಗಳೂರು: ಪರಪ್ಪನ ಅಗ್ರಹಾರ ಬಂಧಿಖಾನೆಯಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸಿಗರೇಟ್ ಹೇಗೆ ಬಂತು? ಕುರ್ಚಿ ಹಾಕಿದವರು ಯಾರು? ಮೊಬೈಲ್ ೆನ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಗೃಹ ಸಚಿವ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರೀತಿ ಘಟನೆ ನಡೆದಿದೆ ಎಂಬುದರ ಕುರಿತು ವರದಿ ಕೇಳಿದ್ದೇನೆ. ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದರೆ, ವರದಿ ಆಧರಿಸಿ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಹೈ ಫ್ರಿಕ್ವೆನ್ಸಿ ಜಾಮರ್ ಅಳವಡಿಸಲಾಗಿತ್ತು. ಸುತ್ತಮುತ್ತಲಿನ ಏರಿಯಾಗಳಿಗು ತೊಂದರೆಯಾಗುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಫ್ರೀಕ್ವೆನ್ಸಿ ಕಡಿಮೆ ಮಾಡಲಾಯಿತು. ಬಂಧಿಖಾನೆ ಒಳಗೆ ಫೋಟೋ ತೆಗೆದಿರುವವರು ಯಾರು? ಮೊಬೈಲ್ ಹೇಗೆ ಹೋಯಿತು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ ಎಂದರು.

ಜೈಲಿಗೆ ಭೇಟಿ ನೀಡಿದವರ ಬಗ್ಗೆಯೂ ತನಿಖೆಯಲ್ಲಿ ಹೊರಬರಲಿದೆ. ಕಾರಣಕರ್ತರು ಯಾರು ಎಂಬ ಸತ್ಯಾಂಶ ಹೊರಬರಲಿದೆ. ಮೊಬೈಲ್ ಬಳಕೆಗೆ ಅವಕಾಶ ಕೊಟ್ಟವರು ಯಾರು? ಮೇಲಧಿಕಾರಿಗಳು ಯಾರೇ ಇದ್ದರು ಕ್ರಮ ಜರುಗಲಿದೆ ಎಂದು ಹೇಳಿದರು.

ಯಾರ ಒತ್ತಡವೂ ಇಲ್ಲ

ತನಿಖೆಯಲ್ಲಿ ಎಲ್ಲ ವೈಫಲ್ಯ ಗೊತ್ತಾಗಲಿದೆ. ನನಗೆ ಯಾರ ಒತ್ತಡವು ಇಲ್ಲ. ಈ ಪ್ರಕರಣ ಈಗ ಆಚೆ ಬಂದಿರುವುದರಿಂದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು

ಪೊಲೀಸರು ಸಲ್ಲಿಸಲಿರುವ ಚಾರ್ಜ್‌ಶೀಟ್ ಮೇಲೆ ಯಾವುದೇ ರೀತಿಯ ಅನುಮಾನ ಪಡುವುದು ಬೇಡ. ನಾವು ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ. ಆರೋಪಿಗಳನ್ನು ಬೇರೆ ಕಡೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು. ಮರೆಮಾಚುವ, ಸುಳ್ಳು ಹೇಳುವ ಪ್ರಮೇಯ ನನಗಿಲ್ಲ. ತಪ್ಪಿನಲ್ಲಿ ಯಾರ ಪಾತ್ರ ಇದೆ ಎಂಬುದು ಕಂಡು ಬಂದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ ಎಂದು ಡಾ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net