ಇದೊಂದು ವಿಶೇಷ ಅನುಭವ: ಆದಂಪುರ್​ ವಾಯನೆಲೆಯಲ್ಲಿ ಯೋಧರನ್ನು ಭೇಟಿಯಾದ ಪ್ರಧಾನಿ ಮೋದಿ! PM Modi

PM Modi
Published on

PM Modi : ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡುವೆಯೇ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 13) ಬೆಳಗ್ಗೆ ಪಂಜಾಬ್‌ನ ಆದಂಪುರ್​ ವಾಯುನೆಲೆಗೆ ಭೇಟಿ ನೀಡಿ, ಯೋಧರೊಂದಿಗೆ ಸಂವಾದ ನಡೆಸಿದ್ದಾರೆ.

ಪ್ರಧಾನಿ ಮೋದಿ ಭೇಟಿಯ ಸಮಯದಲ್ಲಿ ವಾಯುಪಡೆಯ ಸಿಬ್ಬಂದಿ ವಾಯುನೆಲೆಯಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಪಾಕ್​ ಸೇನಾ ದಾಳಿಯಿಂದ ಸೀಮಿತ ಹಾನಿಗೊಳಗಾದ ಭಾರತೀಯ ವಾಯುಪಡೆಯ (ಐಎಎಫ್) ನಾಲ್ಕು ಪ್ರಮುಖ ನಿಲ್ದಾಣಗಳಾಲ್ಲಿ ಆದಂಪುರ್​ ವಾಯುನೆಲೆಯೂ ಒಂದು. ಉದಂಪುರ್​, ಪಠಾಣ್‌ಕೋಟ್ ಮತ್ತು ಭುಜ್​ ವಾಯುನೆಲೆ ಕೂಡ ಸಣ್ಣ ಪ್ರಮಾಣದಲ್ಲಿ ಹಾನಿಗೆ ಒಳಗಾಗಿವೆ.

ತಮ್ಮ ಎಕ್ಸ್ ಖಾತೆಯಲ್ಲಿ ಸೈನಿಕರೊಂದಿಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ "ಬಹಳ ವಿಶೇಷ ಅನುಭವ" ಎಂದು ಬಣ್ಣಿಸಿದ್ದಾರೆ.

ಇಂದು ಬೆಳಗ್ಗೆ ನಾನು ಎಎಫ್‌ಎಸ್ ಆದಂಪುರ್​ಗೆ ಹೋಗಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ ಎಂದು ಪ್ರಧಾನಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ಮೋದಿ ಅವರು ನಿನ್ನೆ (ಸೋಮವಾರ) ತಮ್ಮ ಭಾಷಣದಲ್ಲಿ, ಪಾಕಿಸ್ತಾನದ ಮೇಲಿನ ನಮ್ಮ ಮಿಲಿಟರಿ ವಿಜಯವನ್ನು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಅರ್ಪಿಸುತ್ತಿರುವುದಾಗಿ ಘೋಷಿಸಿದರು. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಮ್ಮೊಂದಿಗೆ ಸೇರಬೇಕಾಗಿದ್ದವರು ನಮ್ಮ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಅವರು ತಮ್ಮ ವಿವೇಚನೆಯನ್ನು ಕಳೆದುಕೊಂಡಿದ್ದಾರೆ ಮತ್ತು ನಮ್ಮ ಮಿಲಿಟರಿ ನೆಲೆಗಳು, ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು ಮತ್ತು ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಆದರೆ ಅವರು ಆ ಪ್ರಯತ್ನದಲ್ಲಿ ಶೋಚನೀಯವಾಗಿ ವಿಫಲರಾಗಿದ್ದಾರೆ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಮೋದಿ ತಿರುಗೇಟು ನೀಡಿದರು.

ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಎಲ್ಲೆಡೆ ಹೊಡೆದುರುಳಿಸಿತು. ಅವರು ನಮ್ಮ ಗಡಿಗಳ ಮೇಲೆ ದಾಳಿ ಮಾಡಿದಾಗ, ನಾವು ನೇರವಾಗಿ ಪಾಕಿಸ್ತಾನದ ಹೃದಯಭಾಗವನ್ನು ಗುರಿಯಾಗಿಸಿಕೊಂಡೆವು. ಪ್ರಮುಖ ನಗರಗಳಲ್ಲಿನ ಅವರ ಎಲ್ಲಾ ಪ್ರಮುಖ ಮಿಲಿಟರಿ ಮತ್ತು ವಾಯು ನೆಲೆಗಳನ್ನು ನಾವು ನಾಶಪಡಿಸಿದ್ದೇವೆ. ನಾವು ಪಾಕಿಸ್ತಾನಿ ಸೇನೆಯ ಮೇಲೆ ಊಹಿಸಲಾಗದ ಹಾನಿಯನ್ನುಂಟುಮಾಡಿದ್ದೇವೆ. ಆ ಪ್ರಕ್ರಿಯೆಯಲ್ಲಿ, ನಮ್ಮ ಪಡೆಗಳು ಅದ್ಭುತ ರೀತಿಯಲ್ಲಿ ದಕ್ಷತೆ ಮತ್ತು ಸಂಯಮವನ್ನು ಪ್ರದರ್ಶಿಸಿದವು. ನಮ್ಮ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಯ ಸಾಮರ್ಥ್ಯಗಳ ಸಂಪೂರ್ಣ ರುಚಿಯನ್ನು ಪಾಕಿಸ್ತಾನಕ್ಕೆ ತೋರಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net