ತಮಿಳುನಾಡಿಗೆ ಕಾವೇರಿ ನೀರು ಪ್ರಕರಣ: ಸಿಎಂ ನೇತೃತ್ವದಲ್ಲಿಂದು ನಡೆಯಿತು ವಿಶೇಷ ತುರ್ತು ಸಭೆ; ನಾಳೆ ಮತ್ತೆ ಮೀಟಿಂಗ್!

CM meeting (1)
Published on

ಬೆಂಗಳೂರು: ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್​ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ತುರ್ತು ಸಭೆ ನಡೆಯಿತು.

ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಹಾಗೂ ತಳೆಯಬೇಕಾದ ನಿಲುವುಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ನಾಗೇಂದ್ರ, ಮುಖ್ಯಮಂತ್ರಿಯವರ ಕಾನೂನುಸಲಹೆಗಾರ ಎ.ಎಸ್. ಪೊನ್ನಣ್ಣ, ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಎಸಿಎಸ್ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ನಾಳೆ ಮತ್ತೆ ಸಭೆ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ನಾಳೆ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ ಮತ್ತೆ ವಿಶೇಷ ತುರ್ತು ಸಭೆ ನಡೆಯಲಿದೆ.

ಮಧ್ಯಾಹ್ನ 12:30ರ ಸುಮಾರಿಗೆ ನಡೆಯಲಿರುವ ಈ ವಿಶೇಷ ತುರ್ತು ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರುಗಳು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರುಗಳು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net