

ಇಂದು ಜೂನ್ 21, ಅಂತಾರಾಷ್ಟ್ರೀಯ ಯೋಗದಿನ. ಈ ದಿನ ಉತ್ತರಾರ್ಧ ಗೋಳದಲ್ಲಿ ಕತ್ತಲೆಗಿಂತ ಹಗಲಿನ ಪ್ರಮಾಣ ಅಧಿಕತಮವಾಗಿರುವ ದಿನ. ಕಟಕವಲಯದ ಮೇಲೆ ನೇರವಾಗಿ ಸೂರ್ಯನು ಬೆಳಗುವ ದಿನ. ಭೂಮಿ ನೇರವಾಗಿ ಸೂರ್ಯನಿಗೆ ಅಭಿಮುಖವಾಗಿ ಬಾಗಿರುವ ದಿನ. ಪ್ರಸಿದ್ಧವೂ ಪ್ರಚಲಿತವೂ ಆದ ಸೂರ್ಯನಮಸ್ಕಾರದಲ್ಲೂ ಸೂರ್ಯನ ಹೆಸರು ಅಂಕಿತವಾಗಿದೆ. ಪ್ರಸಿದ್ಧ ಗಾಯತ್ರೀಮಂತ್ರವೂ ಸವಿತೃದೇವನನ್ನು ಸ್ತುತಿಸುತ್ತದೆ. ನಾವು ಮಾಡುವ ಆಸನ-ಪ್ರಾಣಾಯಾಮಗಳಿಗೂ ಸೂರ್ಯನಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಯೋಗದ ವಾಸ್ತವಿಕಾರ್ಥ ಗಮನಿಸಿದರೆ ಈ ಪ್ರಶ್ನೆ ಬಗೆಹರಿಯುವುದು. ಯೋಗವೆಂದರೆ ಸೇರುವುದು, ಒಂದುಗೂಡುವುದು. ಆಯುರ್ವೇದವು ಪದಾರ್ಥಗಳ ಯೋಗದಿಂದ ಔಷಧಗಳ ತಯಾರಿಕೆಯನ್ನು ವಿವರಿಸುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳ ಯೋಗದ ಫಲದ ಬಗ್ಗೆ ಜಿಜ್ಞಾಸೆ. ಅಕ್ಷರಗಳ ಯೋಗದಿಂದ ಪದಗಳುಂಟಾಗುತ್ತವೆ. ಅಕಸ್ಮಾತ್ತಾಗಿ ರಸ್ತೆಯಲ್ಲಿ ಬಹಳ ದಿನಗಳ ನಂತರ ಪರಿಚಿತರು ಸಿಕ್ಕಿದರೆ, ‘ಏನು ಸುಯೋಗ!’ ಎಂದು ಹೇಳುವುದುಂಟು. ಹಾಗಾದರೆ ಯೋಗ-ಶಾಸ್ತ್ರ, ಯೋಗ-ದಿನ ಎಂದಾಗ ಇಲ್ಲಿ ಯಾವುದರ ಸೇರ್ಪಡೆಯನ್ನು ಹೇಳುತ್ತಿದೆ? ಇಲ್ಲಿ ಜೀವಾತ್ಮ-ಪರಮಾತ್ಮರ ಸೇರುವಿಕೆ ಹೇಳುತ್ತದೆ! ನಮ್ಮನ್ನು ಪರಿಪೂರ್ಣವಾಗಿ ಭಗವಂತನಲ್ಲಿ ಒಂದಾಗಿಸಿಬಿಡುವುದನ್ನು ಹೇಳುತ್ತದೆ. ಮೈ-ಮನಗಳನ್ನು ಮರೆತ ಆ ಪರಮಾತ್ಮಾನುಭವದ ಸ್ಥಿತಿಯನ್ನು ಹೇಳುತ್ತದೆ. ಇದನ್ನು ಸಮಾಧಿ, ಸಹಜಾವಸ್ಥಾ ಎಂದು ಅನೇಕ ಹೆಸರುಗಳಿಂದ ಕರೆಯುವುದುಂಟು. ಆ ಸ್ಥಿತಿವಿಶೇಷಕ್ಕೆ ಅನೇಕ ಸ್ತರಗಳುಂಟು ಎಂದು ಶಾಸ್ತ್ರಗಳು ಹೇಳುತ್ತವೆ. ಈ ಅನುಭವ ಹೇಗಿರುತ್ತದೆ ಎಂಬ ಕುತೂಹಲವು ಉಂಟಾಗುವುದು ಸಹಜ. ಶಂಕರಾಚಾರ್ಯರು ‘ಯೋಗತಾರಾವಳಿ’ಯಲ್ಲಿ ಪರಮಾತ್ಮನನ್ನು ಪ್ರಕಾಶಮಾನವಾದ ಸೂರ್ಯನಿಗೆ ಹೋಲಿಸಿದ್ದಾರೆ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಯೋಗದ ತುತ್ತತುದಿಯ ಅನುಭವವನ್ನು ವಿವರಿಸುತ್ತ, ‘ಕೋಟಿ ಕೋಟಿ ಸೂರ್ಯನೆಂದೂ ಹೇಳಬಹುದು; ಆದರೂ ಬೆಳದಿಂಗಳಂತೆ ತಂಪಾಗಿದ್ದಾನೆ’ ಎಂದು ಹೇಳಿದ್ದಾರೆ.
ನಮ್ಮೊಳಗೆ ಕಾಣುವ ಈ ಸೂರ್ಯನಾರಾಯಣನ ಹತ್ತಿರಕ್ಕೆ ಕರೆದೊಯ್ಯುವ ಮಾರ್ಗಗಳನೇಕ. ಒಂದೂಕಾಲು ಲಕ್ಷ ಯೋಗಮಾರ್ಗಗಳುಂಟು ಎಂಬುದಾಗಿ ಹೇಳುತ್ತಾರೆ. ಧ್ಯಾನ ಮಾಡುವುದು, ಯಜ್ಞ-ಹೋಮ-ಹವನಗಳನ್ನು ಆಚರಿಸುವುದು, ಭಾಗವತ, ರಾಮಾಯಣ ಮುಂತಾದವುಗಳ ಪಾರಾಯಣ, ಗಾಯತ್ರೀ ಮುಂತಾದ ಮಂತ್ರಗಳ ಜಪ, ಸ್ತೋತ್ರಗಳನ್ನು ಹೇಳುವುದು, ದಿನನಿತ್ಯ ಮಾಡುವ ಪೂಜೆ- ಇವೆಲ್ಲವೂ ಆ ಸಮಾಧಿಸ್ಥಿತಿಯ ಪರಮಾನಂದ ಪಡೆಯಲು ಮಾರ್ಗಗಳು. ಯೋಗವನ್ನು ಸಾಧಿಸಲು ಸಾಧನಗಳು. ನಾವು ಯೋಗವೆಂದು ಗುರುತಿಸುವ ಆಸನ, ಪ್ರಾಣಾಯಾಮಗಳೇ ಮುಂತಾದ ಉಪಾಯಗಳೂ ಅಂತಹ ಯೋಗಮಾರ್ಗಗಳ ಪೈಕಿ ಒಂದು. ಆಸನ-ಪ್ರಾಣಾಯಾಮಗಳಿಂದ ದೊರಕುವ ಆರೋಗ್ಯಲಾಭಗಳು ಅಪಾರ. ಆದರೆ ಪತಂಜಲಿ ಮಹರ್ಷಿಗಳಿಂದ ಪ್ರಣೀತವಾಗಿ ಪ್ರಸಿದ್ಧವಾಗಿರುವ ಅಷ್ಟಾಂಗಯೋಗದ ಪರಮಫಲವೆಂದರೆ ಸಮಾಧಿಯ ಆನಂದಾನುಭವ. ‘ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾ
ಹಾರ-ಧಾರಣ-ಧ್ಯಾನ-ಸಮಾಧಿ’ ಎಂಬೀ ಎಂಟು ಅಂಗಗಳು ಸೇರಿ ಅಷ್ಟಾಂಗಯೋಗವೆಂದು ಕರೆಸಿಕೊಳ್ಳುತ್ತವೆ. ಈ ಆಸನಗಳು ಹೇಗೆ ನಮ್ಮನ್ನು ಸಮಾಧಿಯ ಅನುಭವದತ್ತ ಕರೆದೊಯ್ಯಬಲ್ಲವು? ಅಂಗವಿನ್ಯಾಸಕ್ಕೂ ನಮ್ಮೊಳಗಿನ ಜ್ಞಾನಸೂರ್ಯನನ್ನು ನೋಡುವುದಕ್ಕೂ ಏನು ಸಂಬಂಧ ಎಂದು ತಿಳಿಯಲು ಸನ್ನಿವೇಶವೊಂದನ್ನು ಊಹಿಸಿಕೊಳ್ಳೋಣ. ಕ್ರಿಕೆಟ್ ಮ್ಯಾಚ್ ತುಂಬ ಸ್ವಾರಸ್ಯವಾಗಿ ನಡೆಯುತ್ತಿದೆ; ಒಂದು ಬಾಲ್ನಲ್ಲಿ ಆರು ರನ್ ತೆಗೆದು ಭಾರತ ಗೆಲ್ಲಬೇಕಲ್ಲ ಎಂಬ ಉತ್ಸಾಹ-ಆತಂಕಗಳ ಅಲೆಗಳಲ್ಲಿ ತತ್ತರಿಸುತ್ತಿರುವ ಪ್ರೇಕ್ಷಕನೊಬ್ಬನ ಚಿತ್ರ ಮೂಡಿಸಿಕೊಳ್ಳೋಣ; ಕುರ್ಚಿಯ ತುದಿಯಲ್ಲಿ ಕುಳಿತಿದ್ದಾನೆ; ಟಿವಿಯೊಳಗೇ ಹೋಗಿಬಿಡುವುದೋ ಎಂಬಂತೆ ತಲೆಯನ್ನು ಮುಂಚಾಚಿದ್ದಾನೆ; ಒಮ್ಮೆ ಕೈಗಳು ಪಟಪಟನೆ ತಾಳ ಹಾಕುತ್ತ; ಮತ್ತೊಮ್ಮೆ ಕೈ ಸವರುತ್ತ; ಈ ಅಂಗವಿನ್ಯಾಸ ಸಹಜವಾಗಿ ಏಕೆ ಮೂಡಿಬಂದಿತು? ಮನಸ್ಸಿನ ಸ್ಥಿತಿ ಅಂಗಾಂಗಗಳ ಮೇಲೆ ಒಂದು ಮುದ್ರೆಯನ್ನು ಒತ್ತಿದೆ. ಅಂತೆಯೇ ಅಂಗವಿನ್ಯಾಸವೂ ಮನಸ್ಸಿನ ಸ್ಥಿತಿಯನ್ನು ಪರಿಣಮಿಸುವುದುಂಟು; ತೂಕಡಿಸುತ್ತಿರುವ ವಿದ್ಯಾರ್ಥಿಯನ್ನು ‘ಏಯ್ ಬೆನ್ನು ನೆಟ್ಟಿಗೆ ಮಾಡಿ ಕುಳಿತುಕೋ’ ಎಂದು ಗದರಿಸುವುದುಂಟು. ಅಂತೆಯೇ ಭಾರವನ್ನು ಎತ್ತುವಾಗ, ಒಂದು ಕ್ಷಣ ನಿಶ್ಚಲವಾಗಿ, ದಮ್ಕಟ್ಟಿ ‘ಐಸ್ಸಾ’ ಎಂದು ಎತ್ತಿಬಿಡುತ್ತೇವೆ. ಹೀಗೇ ನಿತ್ಯಜೀವನವನ್ನು ಆಲಿಸಿದರೆ, ಅಂಗವಿನ್ಯಾಸಕ್ಕೂ ಮನಸ್ಸಿನ ಸ್ಥಿತಿಗೂ ಇರುವ ಸಂಬಂಧಗಳು ಸ್ಪಷ್ಟವಾಗುತ್ತೆ. ಅಂತೆಯೇ ಭಾರತದ ಮಹರ್ಷಿಗಳು, ಚಿತ್ತದ ವೃತ್ತಿಗಳನ್ನು ನಿಲ್ಲಿಸಿ, ನಿಸ್ತರಂಗಮಹೋದಧಿಯ ಸಮಾಧಿಸಾಮ್ರಾಜ್ಯಕ್ಕೆ ಹತ್ತಲು ಸಹಕಾರಿಯಾಗಿರುವ ಆಸನಗಳ ವಿನ್ಯಾಸವನ್ನೂ, ಪ್ರಾಣಾಯಾಮವನ್ನೂ ಕುಶಲತೆಯಿಂದ ಕಲ್ಪಿಸಿದ್ದಾರೆ. ಇಂದು ಹೊರ ಸೂರ್ಯನು, ಎತ್ತರವಾಗಿ ಬೆಳಗುವಂತೆ ನಾವು ಒಳಗಿನ ಜ್ಞಾನಸೂರ್ಯನನ್ನು ಬೆಳಗಿಸಿಕೊಳ್ಳುವುದಕ್ಕಾಗಿ ಗುರುವಿನ ನೆರವಿನಲ್ಲಿ ಅಷ್ಟಾಂಗಯೋಗದಿಂದ ಪ್ರಾರಂಭಿಸೋಣ.
(ಲೇಖಕರು ಹೈದರಾಬಾದ್ ಐಐಟಿಯ ಸಹಾಯಕ ಪ್ರಾಧ್ಯಾಪಕರು)