

ಕರೊನಾ ಲಾಕ್ಡೌನ್ ಜಾರಿಯಾದಾಗ ಮನೆ ಬಿಟ್ಟು ಹೊರ ಹೋಗದಂಥ ಪರಿಸ್ಥಿತಿ ಇತ್ತು. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾದ ಧಾರವಾಡದ ನಾಲ್ಕು ಬಡಾವಣೆ ನಿವಾಸಿಗಳು, ಸ್ವಂತ ಖರ್ಚಿನಲ್ಲಿ ಕೆರೆ ನಿರ್ವಿುಸಿಕೊಂಡಿದ್ದಾರೆ. ಧಾರವಾಡದ ಬಸವೇಶ್ವರ ಬಡಾವಣೆ, ಗುರುದೇವನಗರ, ನಂದಿನಿ ಲೇಔಟ್ ಹಾಗೂ ಶಾಖಾಂಬರಿನಗರ ನಿವಾಸಿಗಳ ಜಲ ಸಂರಕ್ಷಣೆಯ ಪಣ ‘ನಮ್ಮ ಕೆರೆ’ಯಾಗಿ ಮೈದಳೆದು ನಿಂತಿದೆ.
ನಾಲ್ಕು ಬಡಾವಣೆ ವ್ಯಾಪ್ತಿಗೆ 1 ಎಕರೆ 5 ಗುಂಟೆ ವಿಸ್ತಾರದ ಕೆರೆ ಇತ್ತು. ಆದರೆ, ಹೂಳು ತುಂಬಿ ನೀರು ನಿಲ್ಲುತ್ತಿರಲಿಲ್ಲ. ಅಲ್ಲದೆ, ಕೆಲವರಿಂದ ಅತಿಕ್ರಮಣ ಯತ್ನವೂ ನಡೆದಿತ್ತು. ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಲಾಕ್ಡೌನ್ ಸಮಯದಲ್ಲಿ ಬಡಾವಣೆಯ ಪ್ರಮುಖರು ಕೆರೆಯ ಹೂಳು ತೆಗೆಸಿ, ಸುತ್ತಲೂ ಒಡ್ಡು ನಿರ್ವಿುಸುವ ನಿರ್ಧಾರ ಕೈಗೊಂಡರು. ಸರ್ಕಾರದ ಅನುದಾನವಿಲ್ಲದೆ -ಠಿ;4 ಲಕ್ಷ ಸಂಗ್ರಹಿಸಿ ವಿಸ್ತಾರವಾದ ಕೆರೆ ನಿರ್ವಿುಸಿಕೊಂಡಿದ್ದಾರೆ. ಮುಚ್ಚಿ ಹೋಗಿದ್ದ ಕೆರೆಗೆ ಮರುಜೀವ ನೀಡಿ ‘ನಮ್ಮ ಕೆರೆ’ ಎಂದು ನಾಮಕರಣ ಮಾಡಿದ್ದಾರೆ. ಕೆರೆ ನಿರ್ವಣದಲ್ಲಿ ಬಡಾವಣೆಗಳ ನಿವಾಸಿಗಳಾದ ಶಿವಶರಣ ಕಲಬಶೆಟ್ಟರ, ಸುರೇಶ ಹೊರಡಿ, ಅಳಗುಂಡಿಮಠ, ದೀಪಕ್ ಗರಗ, ಮುತ್ತಪ್ಪ ಕಾರೇರ, ಆನಂದ ನಾಗೋಜಿ, ಚಿಲ್ಲಣ್ಣವರ ಹಾಗೂ ಬಸರಿ ಕುಟುಂಬದವರು ಮುಂದಾಳತ್ವ ವಹಿಸಿದ್ದರು. ಅವರೊಂದಿಗೆ ನಾಲ್ಕೂ ಬಡಾವಣೆಗಳ ಜನ ತಮ್ಮ ಕೈಲಾದಷ್ಟು ಹಣಕಾಸಿನ ನೆರವು ನೀಡಿದ್ದಾರೆ. ಜೂನ್-ಜುಲೈನಲ್ಲಿ ಸುರಿದ ಮಳೆಗೆ ಕೆರೆ ಭರ್ತಿಯಾಗಿದೆ.
ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಮಹಾಂತೇಶ್ (32) ಜಲಸಂರಕ್ಷಣೆ ಮತ್ತು ಜನರಲ್ಲಿ ಜಾಗೃತಿ ಸೇರಿ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಓದಿದ್ದು ಬಿ.ಇ. ಮೆಕಾನಿಕಲ್. ಖಾಸಗಿ ಸಂಸ್ಥೆಯ ಇಂಜಿನಿಯರ್. ಗಿಡಮರಗಳ ಸಂರಕ್ಷಣೆ, ಸ್ವಚ್ಛತೆ ನಿರ್ವಹಣೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಿಥಿಲಾವಸ್ಥೆಯಲ್ಲಿರುವ ಉದ್ಯಾನ, ಕಲ್ಯಾಣಿಗಳ ಅಭಿವೃದ್ಧಿ ಸೇರಿ ವಿವಿಧ ಸೇವಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ನೀರಿನ ಉಳಿತಾಯ ಮತ್ತು ಮಿತ ಬಳಕೆಯ ಮಹತ್ವದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ನಿರ್ವಿುಸಿದ್ದಾರೆ. ‘ಜಲ ಅಭಿಯಾನ-2’ ಮತ್ತು ‘ಥೀಮ್ ಆಫ್ ಇಂಡಿಯಾ-2050’ ಸಾಕ್ಷ್ಯತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲಿ ಗತಕಾಲದ ಜಲಮೂಲ, ಪ್ರಸ್ತುತ ಸ್ಥಿತಿಗತಿಗಳು ಮತ್ತು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ದಂಡಿಗಾನಹಳ್ಳಿ ಜಲಾಶಯ ಮತ್ತು ಜಕ್ಕಲಮಡು ಜಲಾಶಯ ಸೇರಿ ವಿವಿಧೆಡೆ ಜಲಮೂಲಗಳ ಸಂರಕ್ಷಣೆ ಮತ್ತು ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.
ಮಲೆನಾಡಿನಲ್ಲಿದ್ದರೂ ಅದು ಅರೆ ಬಯಲುಸೀಮೆ ಪ್ರದೇಶ. ಅಲ್ಲಿನ ಎರಡು ಬೃಹತ್ ಕೆರೆಗಳು ಡಿಸೆಂಬರ್ ವೇಳೆಗೆ ನೀರಿಲ್ಲದೆ ಒಣಗುತ್ತಿದ್ದವು. ಇದು ಏಳು ವರ್ಷದ ಹಿಂದಿನ ಮಾತು. ಈಗ ಪರಿಸ್ಥಿತಿ ಭಿನ್ನ. ಬೇಸಿಗೆಯಲ್ಲೂ ಈ ಕೆರೆಗಳಲ್ಲಿ ನೀರಿರುತ್ತದೆ. ಸುತ್ತಲ ನಾಲ್ಕಾರು ಗ್ರಾಮಗಳ ಜಾನುವಾರುಗಳಿಗೆ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಈ ಕೆರೆಗಳೇ ಜೀವನಾಡಿ. ಇದು ಸಾಧ್ಯವಾಗಿರುವುದು ನಿವೃತ್ತ ಗ್ರಾಮ ಲೆಕ್ಕಿಗ ಸಿ.ಶಿವಾನಂದಪ್ಪ ಅವರ ಪರಿಶ್ರಮ ಹಾಗೂ ದೂರದೃಷ್ಟಿಯಿಂದ. ಶಿವಮೊಗ್ಗ ತಾಲೂಕಿನ ವಿಠಗೊಂಡನಕೊಪ್ಪದ ಸಿ.ಶಿವಾನಂದಪ್ಪ, ಬಸವೇಶ್ವರ ಕೆರೆ ಬಳಕೆದಾರರ ಅಭಿವೃದ್ಧಿ ಸಂಘ ಕಟ್ಟಿ, ಅಧ್ಯಕ್ಷ ಸ್ಥಾನದ ಹೊಣೆ ಹೊತ್ತು ಎರಡು ಕೆರೆಗಳನ್ನು, ನೀರಿನ ಸಂಗ್ರಹಗಾರಗಳನ್ನಾಗಿ ಮಾಡಿದ್ದು ಸಣ್ಣ ವಿಷಯವಲ್ಲ. ಸಂಪೂರ್ಣ ಶಿಥಿಲಗೊಂಡಿದ್ದ 6.39 ಎಕರೆ ವಿಸ್ತೀರ್ಣದ ಹಲಸಿನಕಟ್ಟೆ ಹಾಗೂ 8.04 ಎಕರೆಯ ಹುಲಿಕಟ್ಟೆ ಕೆರೆಯನ್ನು -ಠಿ;14 ಲಕ್ಷ ವೆಚ್ಚದಲ್ಲಿ 2013ರಲ್ಲಿ ಅಭಿವೃದ್ಧಿಪಡಿಸಲಾಯಿತು. ಪರಿಣಾಮ, ಈಗ 300 ಎಕರೆಯಲ್ಲಿ ಒಂದು ಭತ್ತದ ಬೆಳೆ ಸರಾಗವಾಗಿ ಬರುತ್ತಿದೆ. ಜಲಸಂವರ್ಧನೆ ಯೋಜನೆಯ 2ನೇ ಹಂತದ ಅನುದಾನವನ್ನು ಈ ಕೆರೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದ್ದು, ಅನುದಾನ ಕಡಿಮೆಯಾದಾಗ ಸ್ವತಃ ಸಿ.ಶಿವಾನಂದಪ್ಪ ತಮ್ಮ ಪಿಂಚಣಿಯ ಹಣವನ್ನು ಕೆರೆಗಳ ಪುನಶ್ಚೇತನಕ್ಕೆ ನೀಡಿದ್ದಾರೆ.
ಕೊಳವೆಬಾವಿಗಳನ್ನು ಕೊರೆಸಿ ಕೈಸುಟ್ಟುಕೊಳ್ಳುವ ಬದಲು ರೈತರು ಕೃಷಿ ಹೊಂಡಗಳ ಮೂಲಕ ಜಲ ಸಂರಕ್ಷಣೆ ಮಾಡಿದರೆ ಯಶಸ್ವಿ ಕೃಷಿಕರಾಗಬಹುದು ಎಂಬುದಕ್ಕೆ ದಾವಣಗೆರೆ ತಾಲೂಕು ಹಾಲುವರ್ತಿ ಗ್ರಾಮದ ರೈತ ಎಚ್.ಎಂ.ದ್ಯಾಮಣ್ಣ ಉದಾಹರಣೆಯಾಗಿದ್ದಾರೆ. ದ್ಯಾಮಣ್ಣ ಯಶೋಗಾಥೆಯಿಂದ ಪ್ರೇರಣೆಗೊಂಡು ಸುತ್ತಮುತ್ತಲಿನ ಗ್ರಾಮಗಳ ಕೃಷಿಕರೂ ಈ ಕಾರ್ಯದತ್ತ ಆಸಕ್ತಿ ತೋರಿದ್ದಾರೆ.
ಬೋರ್ವೆಲ್ಗಳನ್ನೇ ನಂಬಿ 11 ಎಕರೆ ತೋಟದಲ್ಲಿ ಬೆಳೆದಿದ್ದ ಅಡಕೆ, ತೆಂಗು ಇನ್ನಿತರ ಬೆಳೆಗಳನ್ನು ಉಳಿಸಿಕೊಳ್ಳಲು ದ್ಯಾಮಣ್ಣ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. 2016 ರಿಂದ 18ರವರೆಗೆ ಕೊಳವೆಬಾವಿ ಕೊರೆಸುವುದಕ್ಕಾಗಿಯೇ ಅವರು -ಠಿ; 10-12 ಲಕ್ಷ ಖರ್ಚು ಮಾಡಿದರು. ಮಳೆ ಇಲ್ಲದೆ ಬೋರ್ಗಳು ಒಣಗಿದಾಗ, ಸಮುದಾಯ ಕೃಷಿ ಹೊಂಡದ ಆಲೋಚನೆ ಹೊಳೆಯಿತು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನವೂ ದೊರೆಯಿತು. 2019ರ ಜೂನ್ನಲ್ಲಿ 8.50 ಲಕ್ಷ ರೂ.ಗಳಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದರು. 320 ಅಡಿ ಉದ್ದ, 140 ಅಡಿ ಅಗಲ, 24 ಅಡಿ ಆಳದ ಹೊಂಡವು 2.80 ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೃಷಿ ಹೊಂಡ ನಿರ್ವಣವಾದ ತಿಂಗಳಲ್ಲೇ ಮಳೆ ಬಂದು ಅರ್ಧ ಹೊಂಡ ಭರ್ತಿಯಾಯಿತು. 2 ತಿಂಗಳ ನಂತರ ಇನ್ನೊಂದು ಮಳೆ ಬಂದಾಗ ಪೂರ್ತಿ ತುಂಬಿಕೊಂಡಿತು. ಇಂದಿನವರೆಗೂ ಆ ಹೊಂಡ ಖಾಲಿಯಾಗಿಲ್ಲ. ಅಡಕೆ ಬೆಳೆಯುವ ಕ್ಷೇತ್ರವನ್ನು 2 ಎಕರೆ ವಿಸ್ತರಿಸಿಕೊಂಡಿದ್ದಾರೆ.
ಗೇರುಬೀಜ ಮರಗಳ ಗುಡ್ಡದ ತುದಿಯಲ್ಲಿ ಕಳೆದ ವರ್ಷ ಬೃಹತ್ ಕೆರೆ ನಿರ್ವಿುಸಿರುವ ಭಟ್ಟರು, ಅದಕ್ಕೆ ಸಿಲ್ಪಾಲಿನ್ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ. ಅದು ಮಳೆಯಿಂದಲೇ ತುಂಬಬಹುದು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಕೆಳಗಿರುವ ಕೆರೆಯಿಂದ ನೀರು ತುಂಬಿಸುವುದು ಉದ್ದೇಶವಾಗಿತ್ತು. ಗುಡ್ಡದ ಕೆರೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದು ಸೆಪ್ಟೆಂಬರ್ನಲ್ಲಿ. ಬಳಿಕ ಅದೃಷ್ಟವಶಾತ್ ಉತ್ತಮ ಮಳೆಯಾಗಿ ಕೆರೆ ಅರ್ಧ ತುಂಬಿದೆ. ಇದೇ ಮಳೆ ನೀರನ್ನೇ ಬಳಸಿಕೊಂಡು ಕೃಷಿ ಮಾಡಬಹುದು ಎನ್ನುವುದಕ್ಕೆ ಭಯವಿಲ್ಲ ಎನ್ನುತ್ತಾರೆ ಗೋವಿಂದ ಭಟ್. 18 ಎಕರೆ ಜಾಗ ಹೊಂದಿರುವ ಭಟ್ಟರ ಗುಡ್ಡ ರಸ್ತೆಯ ಮೇಲ್ಭಾಗದಲ್ಲಾದರೆ ತೋಟ ಕೆಳಭಾಗದಲ್ಲಿದೆ. 500 ಅಡಿ ಎತ್ತರದಿಂದ ನೀರು ಹರಿದು ಬಂದು ಇಡೀ ತೋಟಕ್ಕೆ ಬಳಕೆಯಾಗುತ್ತಿದೆ.
ಎಲ್ಲಿ ಕೆರೆಕಟ್ಟೆಗಳು ತುಂಬಿರುತ್ತವೆಯೋ ಆ ಗ್ರಾಮ ಸಮೃದ್ಧವಾಗಿರುತ್ತದೆ...! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಬತ್ತಿಹೋಗಿದ್ದ ಕೆಲವು ಕೆರೆಗಳ ಹೂಳನ್ನು ಸ್ವಂತ ಖರ್ಚಿನಲ್ಲಿ ತೆಗಿಸಿ, ಜಲಮೂಲ ವೃದ್ಧಿಗೆ ಕಾರಣವಾಗಿರುವ ಉದ್ಯಮಿ ಹರಪಳ್ಳಿ ರವೀಂದ್ರ ಅವರ ಅನುಭವದ ನುಡಿಯಿದು.
‘ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲು ಇಲ್ಲಿನ ಮಳೆ ನೀರು ಸಂಗ್ರಹಿಸಿದರೆ ಸಾಕು. ಒಂದು ವರ್ಷ ಬೀಳುವ ಮಳೆ ನೀರನ್ನು ಹಿಡಿದಿಟ್ಟರೆ ಮೂರು ವರ್ಷಕ್ಕಾಗುವಷ್ಟು ಆಗುತ್ತದೆ. ಆದರೆ ಇಲ್ಲಿ ಸಮಸ್ಯೆ ಬಗೆಹರಿಯುವುದು ಯಾರಿಗೂ ಬೇಕಿಲ್ಲ’. ಇದು ಖ್ಯಾತ ಜಲ ಸಂರಕ್ಷಕ, ಜಲ ಸಾಕ್ಷರತೆ ತರಬೇತುದಾರ ಅಯ್ಯಪ್ಪ ಮಸಗಿ ಅವರ ಸ್ಪಷ್ಟ ಹಾಗೂ ನೋವಿನ ನುಡಿಗಳು.
ಧೂಪತ್ ಮಹಾಗಾಂವ್ ಗ್ರಾಮದಲ್ಲಿ ಒತ್ತುವರಿಯಾಗಿ ಪಾಳು ಬಿದ್ದಿದ್ದ 12ನೇ ಶತಮಾನದ ಗುಗ್ಗವೆ ಕೆರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಯಕಲ್ಪ ನೀಡಿದ ಹೆಗ್ಗಳಿಕೆ ಶ್ರೀನಿವಾಸ ಜೊನ್ನಿಕೆರೆ ಅವರದ್ದು. ಕರೊನಾ ಸಂಕಷ್ಟದ ಸಮಯದಲ್ಲಿ 10 ಲಕ್ಷ ಅನುದಾನ ಖರ್ಚು ಮಾಡಿ ಜನರಿಗೆ ಉದ್ಯೋಗ ನೀಡಿ ಕೆರೆ ಹೂಳೆತ್ತುವ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಮಳೆಯಾಗಿದ್ದರಿಂದ ಕೆರೆಯಲ್ಲಿ ನೀರಿನ ಮಟ್ಟವೂ ಹೆಚ್ಚಾಗಿದೆ. ಇದರಿಂದ ಊರಿನ 4000 ಜನರ ಜತೆಗೆ ಜಾನುವಾರುಗಳ ದಾಹವನ್ನು ಈ ಕೆರೆ ನೀಗಿಸುತ್ತಿದೆ. ಕೆರೆ ಹೂಳೆತ್ತುವುದರ ಜತೆಗೆ ಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿರುವುದು ಶ್ರೀನಿವಾಸ ಪ್ರಯತ್ನಕ್ಕೆ ಸಾರ್ಥಕತೆ ತಂದುಕೊಟ್ಟಿದೆ.