ಕನ್ನಡದಲ್ಲಿ ಬಹುಸಮಯದಿಂದ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು ಡಾ. ಬಿ. ಎಸ್. ಶೈಲಜಾ. ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕಿಯಾಗಿ ನಿವೃತ್ತಿಯಾಗಿದ್ದಾರೆ. ನಾಸಾದ ಕ್ಲೆಮೆಂಟೈನ್ ಯೋಜನೆಯಿಂದ ದೊರೆತ ಚಂದ್ರನ ಚಿತ್ರಗಳನ್ನು ಆಧರಿಸಿ ಲೂನಾರ್ ಬೇಸಿನ್ಗಳ ಅವಧಿಯನ್ನು ಕಂಡುಹಿಡಿದಿದ್ದರು. ಖಗೋಳ ಶಾಸ್ತ್ರದ ಕುರಿತು ಅನೇಕ ಅಧ್ಯಯನಗಳು, ಪಠ್ಯಪುಸ್ತಕ ಸಮಿತಿ, ಸಲಹಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿವಿಧ ದಿನಪತ್ರಿಕೆಗಳಲ್ಲಿ 300ಕ್ಕೂ ಹೆಚ್ಚು ಲೇಖನ, ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ 120ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘ಏನು...? ಗಣಿತ ಅಂದ್ರಾ...?’ ಮುಂತಾದ 17 ಪುಸ್ತಕಗಳನ್ನು ರಚಿಸಿದ್ದಾರೆ. ಅವರು ತಾರಾಲಯ ನಿರ್ದೇಶಕಿಯಾಗಿದ್ದಾಗ ಹೈಬ್ರಿಡ್ ಪ್ರೊಜೆಕ್ಟರ್ ಅಳವಡಿಸಿ, ಖಗೋಳದ ಕುರಿತ ಆಸಕ್ತರ ತಿಳಿವಳಿಕೆ ಹೆಚ್ಚಿಸಲು ಶ್ರಮಿಸಿದರು. ‘ಶುಕ್ರಗ್ರಹದ ಸಂಕ್ರಮಣ’ ಹಾಗೂ ‘ಆಗಸದ ಅಲೆಮಾರಿಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. 2013ರಲ್ಲಿ ಬಿಡುಗಡೆಯಾದ ‘ಬಾಲಂಕೃತ ಚುಕ್ಕಿ: ಧೂಮಕೇತು’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ.