

ತ್ರೇತಾಯುಗದಲ್ಲಿ ಹನುಮರಾಗಿ, ದ್ವಾಪರದಲ್ಲಿ ಭೀಮರಾಗಿ, ಕಲಿಯುಗದಲ್ಲಿ ಪೂರ್ಣಪ್ರಜ್ಞ(ಮಧ್ವ)ರಾಗಿ ಭಗವಂತನ ಕಾರ್ಯದಲ್ಲಿ ನೆರವಾದವರು ಈ ಅವತಾರತ್ರಯರು. ಭಗವಂತನ ಪ್ರೇರಣಾನುಸಾರ ಮುಖ್ಯಪ್ರಾಣ ಉಡುಪಿಯ ಹತ್ತಿರದ ಪಾಜಕ ಗ್ರಾಮದಲ್ಲಿ ಮಧ್ಯಗೇಹಭಟ್ಟ-ವೇದವತಿ ದಂಪತಿಯ ಮಗನಾಗಿ 1238ರ ಪಿಂಗಳ ಸಂವತ್ಸರದ ಆಶ್ವಯುಜ ಶುಕ್ಲ ದಶಮಿಯಂದು ಅವತರಿಸಿದನು. ಮಗುವಿಗೆ ವಾಸುದೇವನೆಂದು ಹೆಸರಿಟ್ಟರು.
ಶೈಶವದಿಂದಲೇ ಅತಿಮಾನುಷ ಘಟನೆಗಳಿಂದ ಇವರೋರ್ವ ಅಲೌಕಿಕ ಚೇತನವೆಂಬ ಸತ್ಯ ಪ್ರಕಟಗೊಳ್ಳತೊಡಗಿತು. ಶಿಶು ವಾಸುದೇವ ಹುರುಳಿಯನ್ನು ಜೀರ್ಣಿಸಿಕೊಂಡಿದ್ದು, ತಂದೆಗೆ ಸಾಲ ನೀಡಿದ ಸಾಹುಕಾರನಿಗೆ ನಾಲ್ಕು ವರ್ಷದ ಮಗು ಹುಣಸೆಬೀಜಗಳನ್ನು ನೀಡಿದಾಗ ಅವು ಹೊನ್ನಾಗಿ ಪರಿವರ್ತನೆಗೊಂಡು ತಂದೆಯನ್ನು ಋಣಮುಕ್ತನನ್ನಾಗಿ ಮಾಡಿದ್ದು, ಸಾಮಾನ್ಯ ಮಕ್ಕಳು ತೊದಲುನುಡಿಯನ್ನು ನುಡಿಯುವ ವಯದಲ್ಲಿ ಪುಟ್ಟ ಪೋರ ವಾಸುದೇವ ಪುರಾಣಿಕರೋರ್ವರನ್ನು ವಾಕ್ಯಾರ್ಥದಲ್ಲಿ ನಿರುತ್ತರನನ್ನಾಗಿ ಮಾಡಿದ್ದು - ಹೀಗೆ ಅನೇಕ ಘಟನೆಗಳು ಸಹಜವಾಗಿದ್ದವು. ಇವು ಮಾತಾಪಿತರಿಗೆ ಆನಂದವನ್ನುಂಟುಮಾಡುತ್ತಿದ್ದವು.
ಉಪನೀತನಾದ ಮಗನನ್ನು ತೋಟಂತಿಲ್ಲಾಯ ಗುರುಗಳ ಬಳಿ ಶಾಸ್ತ್ರಾಭ್ಯಾಸಕ್ಕೆ ಕಳುಹಲು ಶಿಷ್ಯನ ಶಾಸ್ತ್ರಪ್ರೌಢಿಮೆ ಕಂಡು ಆನಂದಿಸಿದರು ಗುರುಗಳು. ತಂದೆ ತಾಯಿ ತನ್ನನ್ನು ವಿವಾಹಬಂಧನಕ್ಕೆ ಸಿಲುಕಿಸುವ ಮೊದಲೇ ಸಂನ್ಯಾಸಾಶ್ರಮ ಸ್ವೀಕರಿಸುವ ನಿರ್ಧಾರ ಮಾಡಿಕೊಂಡಿದ್ದನು.
ಅಚ್ಯುತಪ್ರೇಕ್ಷಾಚಾರ್ಯರೆಂಬ ಗುರುಗಳಿಂದ ಸಂನ್ಯಾಸ ದೀಕ್ಷೆ ಪಡೆದು ಪೂರ್ಣಪ್ರಜ್ಞರಾದರು. ಶ್ರೀಮದಾಚಾರ್ಯರನ್ನು ಆನಂದತೀರ್ಥರೆಂಬ ಹೆಸರಿನಿಂದ ವೇದಾಂತಸಾಮ್ರಾಜ್ಯದ ಅಧಿಪತಿಗಳನ್ನಾಗಿ ಅಭಿಷೇಕ ಮಾಡಿದರು. ತಮ್ಮ ವಾಕ್ಯಾರ್ಥಕೌಶಲದಿಂದ ಅನೇಕ ಪಂಡಿತರನ್ನು ಸೋಲಿಸಿದರು. ಮೋಕ್ಷಕ್ಕೆ ಸಾಧಕವಾದ ಭಾಷ್ಯವನ್ನು ರಚಿಸಿದರು.
ಬದರಿಗೆ ಹೋಗಿ ವ್ಯಾಸಮಹರ್ಷಿಗಳನ್ನು ಕಂಡು ತಮ್ಮ ಗೀತಾಭಾಷ್ಯವನ್ನು ತೋರಿಸಿ ಮೆಚ್ಚುಗೆಯನ್ನು ಪಡೆದುದಾಗಿ ಪ್ರತೀತಿ. ಅವರ ಅನುಜ್ಞೆ ಪಡೆದು ಉಡುಪಿಗೆ ಬಂದು ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ರಚಿಸಿದರು. ಎರಡನೆಯ ಸಾರಿ ಬದರಿಗೆ ಹೋಗಿ ಶ್ರೀ ವೇದವ್ಯಾಸರನ್ನು ದರ್ಶಿಸಿ ಅವರಿಂದ ಅಪ್ಪಣೆ ಪಡೆದು ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥ ರಚಿಸಿದರು.
ನೂರಾರು ಗ್ರಂಥಗಳನ್ನು ರಚಿಸಿರುವರೆಂಬ ಪ್ರತೀತಿಯಿದ್ದರೂ ಈಗ ಮೂವತ್ತೇಳು ಗ್ರಂಥಗಳಷ್ಟೇ ಲಭ್ಯ. ಭಾರತದಾದ್ಯಂತ ಸಂಚರಿಸಿ ವಾದಿಗಳನ್ನು ಜಯಿಸಿ ಸತ್ಸಿದ್ಧಾಂತವನ್ನು ಪ್ರಸಿದ್ಧಿಗೊಳಿಸಿದರು. ಮಧ್ವರ ಭಾಷ್ಯಕ್ಕೆ ಮನಸೋತ ಅನೇಕ ಪಂಡಿತಶ್ರೇಷ್ಠರು ಅವರ ಶಿಷ್ಯತ್ವ ವಹಿಸಿದರು.
ಉಡುಪಿಯಲ್ಲಿ ಸಾಲಿಗ್ರಾಮ ಶಿಲೆಯ ಸರ್ವಾಂಗ ಚಕ್ರಾಂಕಿತವಾದ ಕಡಗೋಲು ಕೃಷ್ಣನ ಸುಂದರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು ಭಕ್ತರಿಗೆ ಆಚಾರ್ಯ ಮಧ್ವರ ಅನುಗ್ರಹ. ಬಿರುಗಾಳಿಗೆ ಸಿಕ್ಕು ತತ್ತರಿಸಿ ಮುಳುಗುತ್ತಿದ್ದ ಹಡಗನ್ನು ತಮ್ಮ ಕಾವಿಶಾಟಿಯನ್ನು ಅವರೆಡೆಗೆ ಬೀಸಿ ಅಭಯಪ್ರದಾನ ಮಾಡಿ ಗಾಳಿಯಿಂದ ರಕ್ಷಿಸಿದ್ದಕ್ಕಾಗಿ ಭಕ್ತಿಯಿಂದ ಕಾಣಿಕೆ ಅರ್ಪಿಸಲು ಬಂದ ಹಡಗಿನ ಯಜಮಾನನಿಂದ ಕೇವಲ ಗೋಪಿಚಂದನ ಪಡೆದರು. ಆ ಗೋಪಿಚಂದನ ಮಧ್ಯದಲ್ಲಿ ದೊರೆತ ವಿಗ್ರಹಗಳೇ ಬಲರಾಮ ಹಾಗೂ ಬಾಲಕೃಷ್ಣ.
ಶ್ರೀಮಧ್ವಾಚಾರ್ಯರು ಐತರೇಯ ಉಪನಷಧ್ಭಾಷ್ಯವನ್ನು ಪ್ರವಚನ ಮಾಡುತ್ತಿರುವ ಸಮಯದಲ್ಲಿ ದೇವತೆಗಳಿಂದ ಪುಷ್ಪವೃಷ್ಟಿಯಾಗುತ್ತಿದ್ದಂತೆಯೇ ಲೋಕದ ದೃಷ್ಟಿಗೆ ಅಗೋಚರರಾಗಿ ಮಹಾಬದರಿಗೆ ತೆರಳಿದರು. ಉಡುಪಿಯ ಅನಂತೇಶ್ವರ ದೇವಾಲಯದಲ್ಲಿ ಆಚಾರ್ಯರು ಅದೃಶ್ಯರಾದ ಸ್ಥಳವನ್ನು ನೋಡಬಹುದು. ಅವರು ಮಾಘ ಶುಕ್ಲ ನವಮಿಯಂದು ತಮ್ಮ ಅವತಾರ ಕಾರ್ಯವನ್ನು ಸಮಾಪ್ತಿಗೊಳಿಸಿದರು.
| ಪುಷ್ಪಾ ಮೋಹನ ಮುದಕವಿ ಬೆಂಗಳೂರು