ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡುವ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಖಾದರ್ ಅವರು ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಾನು ಸ್ಪೀಕರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಮಾಹಿತಿ ನನಗೂ ಇಲ್ಲ, ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ಸದ್ಯಕ್ಕೆ ನಾನು ಯಾವುದೇ ರಾಜಕೀಯದ ಕುರಿತು ಮಾತನಾಡುವುದಿಲ್ಲ, ಎಂದು ಸ್ಪಷ್ಟಪಡಿಸಿದರು.
ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದನ್ನು ಆಡಳಿತ ಪಕ್ಷದ ಹಿರಿಯ ಮುಖಂಡರು ತೀರ್ಮಾನಿಸುತ್ತಾರೆ. ಆದ್ದರಿಂದ ಯಾರೂ ಕೂಡ ನಾನು ಡಿಸಿಎಂ ಆಗಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಬೇಡಿ. ಇವೆಲ್ಲವೂ ಪಕ್ಷ ಹಾಗೂ ನಾಯಕರಿಗೆ ಬಿಟ್ಟ ವಿಚಾರ. ಎಲ್ಲವನ್ನೂ ನಾನೇ ಹೇಳಿದರೆ ಗುಟ್ಟು ಉಳಿಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇಂದು ಹಬ್ಬದ ದಿನವಾಗಿರುವುದರಿಂದ ಹಬ್ಬ ಆಚರಿಸುವುದು ನನ್ನ ಮೊದಲ ಕೆಲಸ. ಬೆಂಗಳೂರಿಗೆ ಹೋಗುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ, ಎಂದ ಅವರು, ಸರ್ಕಾರ ಅಧಿವೇಶನ ಕರೆಯಲು ತೀರ್ಮಾನಿಸಿದಾಗ ಸದನವನ್ನು ಸುಸೂತ್ರವಾಗಿ ನಡೆಸಿಕೊಡುವುದಾಗಿ ತಿಳಿಸಿದರು.