ವಿದ್ಯುತ್ ದರ ಏರಿಕೆಗೆ ಕೈಗಾರಿಕೋದ್ಯಮಿಗಳ ಕಿಡಿ, ಎಂಆರ್‌ಎಸ್ ವೃತ್ತದಲ್ಲಿ ಪ್ರತಿಭಟನೆ

District Chamber of Commerce and Industry
ವಿದ್ಯುತ್ ದರ ಏರಿಕೆ ಖಂಡಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಎಂಆರ್‌ಎಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಅವೈಜ್ಞಾನಿಕ ವಿದ್ಯುತ್ ದರ ಪರಿಷ್ಕರಣೆಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಹಾಗೂ ಕೆಇಆರ್‌ಸಿ ಮತ್ತು ಎಸ್ಕಾಂ ನೀತಿಗಳಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಗುರುವಾರ ನಗರದ ಎಂಆರ್‌ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮೆಸ್ಕಾಂ ವಿದ್ಯುತ್ ದರ ಹೆಚ್ಚುವರಿ ಹೊರೆ ಆಗುತ್ತಿದ್ದು, ಏಕಾಏಕಿ ವಿದ್ಯುತ್ ದರ ಹೆಚ್ಚಿಸಿರುವುದು ಖಂಡನೀಯ. ಇದರಿಂದ ಉದ್ದಿಮೆಗಳು ಮುಚ್ಚುವ ಭೀತಿಯಲ್ಲಿವೆ. ಸಾರ್ವಜನಿಕರಿಗೂ ಹೊರೆ ಆಗುತ್ತಿದೆ. ಕೂಡಲೇ ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ದರದಲ್ಲಿನ ನಿಗದಿತ ಶುಲ್ಕ ಹಿಂದಿನಂತೆ ಮುಂದುವರಿಸಿಕೊಂಡು ಹೋಗಬೇಕು. ಇಂಧನ ಬೆಲೆ ಅಸ್ಥಿರ ಪದ್ಧತಿಯಲ್ಲಿರುವುದರಿಂದ ಹೆಚ್ಚು ಹೊರೆಯಾಗುತ್ತಿದೆ. ಕರ್ನಾಟಕದಲ್ಲಿ ನೀರಿನಿಂದ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಇಂಧನ ಬೆಲೆ ಹೊರೆ ಕಡಿಮೆ ಇರುವುದರಿಂದ ಸರ್ಕಾರ ಶೇ.50 ವಿನಾಯಿತಿ ಘೋಷಿಸಬೇಕು ಎಂದು ಮನವಿ ಮಾಡಿದರು. ವಿದ್ಯುತ್ ಮೇಲಿನ ತೆರಿಗೆಯನ್ನು ಶೇ.9ರಿಂದ 3ಕ್ಕೆ ಇಳಿಸಬೇಕು. ಎಂಎಸ್‌ಎಂಇ ಉದ್ಯಮಗಳಿಗೆ ಸರ್ಕಾರದ ಅನುದಾನವನ್ನು ನಿಗದಿಪಡಿಸಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಕೈಗಾರಿಕೋದ್ಯಮಿಗಳ ಪರವಾಗಿ ರಾಜ್ಯ ಸರ್ಕಾರವು ಕೂಡಲೆ ಕೆಇಆರ್‌ಸಿಗೆ ದರ ಪರಿಷ್ಕರಣೆ ಆದೇಶ ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಬೇಕು. ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳನ್ನು ಸ್ವಾಯತ್ತ ಸಂಸ್ಥೆ ಆಗಿರುವ ಕೆಇಆರ್‌ಸಿಯು ಗಮನಿಸಿ ಸ್ವಯಂಪ್ರೇರಿತವಾಗಿ ದರ ಪರಿಷ್ಕರಣೆ ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಆರು ತಿಂಗಳಿಗೊಮ್ಮೆ ವಿದ್ಯುತ್ ಪರಿಷ್ಕರಣೆಯನ್ನು ಬಿಟ್ಟು ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಅನುಸರಿಸುವುದು ಮತ್ತು ಅಳವಡಿಸಿಕೊಳ್ಳಬೇಕು. ಬಿಲ್ಲಿಂಗ್ ದಿನಾಂಕಗಳನ್ನು ಮೆಸ್ಕಾಂನಿಂದ ಪ್ರತಿ ತಿಂಗಳ 1ರಿಂದ 30 ಅಥವಾ 31ರವರೆಗೆ ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಮೆಸ್ಕಾಂ ಎಸ್‌ಇ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಎಂಎಲ್‌ಸಿ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ರಮೇಶ್ ಕುಮಾರ್ ಹೆಗಡೆ, ನೂರಾರು ಉದ್ಯಮಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net