ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿ

ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಭಾನುವಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಸಮಾಲೋಚಿಸುತ್ತಿರುವುದು.
ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಭಾನುವಾರ ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಸಮಾಲೋಚಿಸುತ್ತಿರುವುದು.
Published on

ಕೆ.ಆರ್.ಪೇಟೆ: ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಭಾನುವಾರ ಪಟ್ಟಣದಲ್ಲಿ ಸಾರ್ವಜನಿಕ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ವಿರುದ್ಧ ಕಿಡಿಕಾರಿ, ಕರ್ತವ್ಯ ಲೋಪದ ಕಾರಣ ಹಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮಕ್ಕೆ ಸಂಬಂಧಿಕರ ಮದುವೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಸಾರ್ವಜನಿಕ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ನಿಲ್ದಾಣದ ಸಾರ್ವಜನಿಕ ಶೌಚಾಲಯ, ಪಾಕಿರ್ಂಗ್ ಸ್ಥಳ, ನಿಲ್ದಾಣದ ಬಳಿಯಿರುವ ರಾಜಕಾಲುವೆ ಒತ್ತುವರಿ, ಪಕ್ಕದ ಮೀನಿನ ಮಾರುಕಟ್ಟೆ, ಅಕ್ಕಿಹೆಬ್ಬಾಳಿನ ಬಸ್ ಸ್ಟ್ಯಾಂಡ್, ವಸತಿ ನಿಲಯ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರಿಗೆ ಇಲಾಖೆಯ ಡಿಸಿ, ಪುರಸಭೆ ಅಧಿಕಾರಿ, ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಉಪಲೋಕಾಯುಕ್ತ ಬಿ. ವೀರಪ್ಪ ಸ್ವಯಂ ಪ್ರಕರಣ ದಾಖಲಿಸಿಕೊಂಡರು.

ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದಲ್ಲಿ ಮಳೆ ನೀರು ನಿಂತಿರುವುದು, ಗಿಡ, ಗಂಟಿ, ಹುಲ್ಲು ಬೆಳೆದು ನಿಂತಿರುವುದು, ಸ್ವಚ್ಛತೆ ಇಲ್ಲದಿರುವುದರ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಲ್ದಾಣದ ಶೌಚಗೃಹ ಬಳಕೆಗೆ ನಿಗದಿಯಂತೆ 2 ರೂ. ಬದಲು 5ರೂ. ಪಡೆಯುತ್ತಿರುವುದು ಕಂಡು ಬಂತು. ಶೌಚಗೃಹ ಬಳಕೆಯ ಹಣ ಪಾವತಿಗೆ ಸ್ಕ್ಯಾನರ್ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಲಾಯಿತು. ವಾಹನಗಳ ಪಾರ್ಕಿಂಗ್ ಪಾವತಿ ಹಣಕ್ಕೆ ರಸೀತಿ ಕೊಡದಿರುವುದನ್ನು ಕಂಡು ಸ್ವೀಕೃತಿ ವ್ಯವಸ್ಥೆಗೆ ನಿರ್ದೇಶನ ನೀಡಿದರು. ಅಲ್ಲದೆ ಮೈಸೂರಿಗೆ ಬಸ್‌ಗಳ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪ್ರಯಾಣಿಕರು ದೂರಿದರು. ಬಸ್ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು. ಈ ವೇಳೆ ನಿಲ್ದಾಣದ ಬಳಿ ರಾಜಕಾಲುವೆ ಒತ್ತುವರಿ ಬಗ್ಗೆ ಸಾರ್ವಜನಿಕರು ಉಪ ಲೋಕಾಯುಕ್ತರ ಗಮನ ಸೆಳೆದರು. ಸ್ಥಳಕ್ಕೆ ಭೇಟಿ ನೀಡಿ ಪುರಸಭೆ ಅಧಿಕಾರಿಗಳಿಗೆ ತೆರವು ಮಾಡುವಂತೆ ಎಚ್ಚರಿಕೆ ನೀಡಿದರು.

ನಿಲ್ದಾಣದ ಪಕ್ಕದಲ್ಲಿ ಮೀನು ಮಾರುಕಟ್ಟೆಯಲ್ಲಿ ಮೀನಿನ ಅಂಗಡಿ ಮಾಲೀಕರು ತ್ಯಾಜ್ಯವನ್ನು ಸಾರ್ವಜನಿಕ ಶೌಚಗೃಹಕ್ಕೆ ತುಂಬಿರುವುದರಿಂದ ಅಂಗಡಿಯ ಪರವಾನಗಿ ಕೇಳಿದ್ದಕ್ಕೆ ಪರವಾನಗೆ ಪಡೆಯದಿರುವುದು ಕಂಡಬಂತು. ಈ ಹಿನ್ನೆಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಅಶೋಕ್ ವಿರುದ್ಧ ಕಿಡಿಕಾರಿದರು. ಪಟ್ಟಣದಲ್ಲಿ ಪರವಾನಗಿ ಇಲ್ಲದಿರುವ ಅಂಗಡಿಗಳ ವಿವರ ನೀಡುವಂತೆ ಸೂಚಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಮಹಿಳಾ ವಾರ್ಡ್‌ನಲ್ಲಿ ಕರ್ಟನ್ ಅಳವಡಿಸದಿರುವುದು, ವಾರ್ಡ್‌ನಲ್ಲಿ ಫ್ಯಾನ್‌ಗಳು ಕೆಟ್ಟು ನಿಂತಿದ್ದರು ದುರಸ್ಥಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಮಾಣವಾಗಿ ಉದ್ಘಾಟನೆ ಆಗದಿರುವ ಅಕ್ಕಿಹೆಬ್ಬಾಳು ಬಸ್ ಸ್ಟ್ಯಾಂಡ್ ಒಂದು ತಿಂಗಳೊಳಗೆ ಉದ್ಘಾಟಿಸುವಂತೆ ಸೂಚಿಸಿದರು. ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ರಜೆ ಕಾರಣ ಮಕ್ಕಳ ಇರಲಿಲ್ಲ. ಕಿಚನ್ ಒಳಗಡೆ ಇರಿಸಿದ್ದ ಗ್ಯಾಸ್‌ನ್ನು ಹೊರಗಡೆ ಇಡುವಂತೆ, ಹೊರಗಡೆ ಗ್ರೀನರಿ ಮಾಡುವಂತೆ ಸೂಚಿಸಿದರು.

ಲೋಕಾಯುಕ್ತ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ತಹಸೀಲ್ದಾರ್ ಡಾ. ಅಶೋಕ್,ಲೋಕೋಪಯೋಗಿ ಇಲಾಖೆಯ ಇಇ ಹರ್ಷ, ಎಇಇ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ನಟರಾಜ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಡಾ. ನರಸಿಂಹ ರಾಜು, ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಗೌಡ, ನವೀನ್, ರಾಜಸ್ವ ನೀರಿಕ್ಷಕ ಜ್ಞಾನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net