

ಶಿವಮೊಗ್ಗ: ಹೊಸ ವರ್ಷವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಖಾಕಿ ಪಡೆ ವಿಶೇಷವಾಗಿ ಆಚರಿಸಿತು.
ಕರ್ತವ್ಯದ ನಡುವೆಯೂ ಸಿಬ್ಬಂದಿ ಜತೆ ಕೇಕ್ ತಿನ್ನಿಸುವ ಮೂಲಕ ಹೊಸ ವರ್ಷವನ್ನು ಪೊಲೀಸರು ಆಚರಿಸಿದರು. ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಹೊಸ ವರ್ಷ ಆಚರಿಸಿ ಸಿಬ್ಬಂದಿಗೆ ಶುಭಾಶಯ ಕೋರಿದರು. ಎಎಸ್‌ಪಿ ಅನಿಲ್ಕುಮಾರ್, ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡೆತಡೆ ಇರಲಿಲ್ಲ. ಗಲಭೆ, ಗಲಾಟೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾದ್ಯಂತೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಪ್ರಮುಖ ವೃತ್ತಗಳು, ರಸ್ತೆಗಳು, ಬಡಾವಣೆಗಳು, ಪ್ರಮುಖ ಗಲ್ಲಿಗಳಲ್ಲಿ ರಾತ್ರಿಯಿಡೀ ಪೊಲೀಸರು ನಿಗಾ ವಹಿಸಿದ್ದರು. ಎಸ್‌ಪಿ ಮಿಥುನ್‌ಕುಮಾರ್ ಸಹಿತ ಹಿರಿಯ ಅಧಿಕಾರಿಗಳು ಫೀಲ್ಡ್‌ಗೆ ಇಳಿದು ಪರಿಶೀಲಿಸಿದರು. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಅಹಿತಕರ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಿದ್ದರು.