

ಶಿವಮೊಗ್ಗ: ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಪೊಲೀಸ್ ಇಲಾಖೆಯ ಎಲ್ಲ ವಾಹನಗಳ ಪರಿವೀಕ್ಷಣೆ ನಡೆಸಿದರು.
ಮೊದಲು ಎಲ್ಲ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ಟ್ರಕ್, ಟಿಟಿ ವಾಹನ, ಟ್ಯಾಂಕರ್, ಹೆದ್ದಾರಿ ಗಸ್ತು ವಾಹನ ಮತ್ತು ಇಆರ್‌ಎಸ್‌ಎಸ್-112 ವಾಹನಗಳನ್ನು ಪರಿಶೀಲಿಸಿದರು. ತುರ್ತು ಸಂದರ್ಭದಲ್ಲಿ ಉಪಯೋಗಿಸುವ ಟೂಲ್ ಕಿಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಹಗ್ಗ, ಟಾರ್ಚ್, ಕಾಷನರಿ ಸೈನ್ ಬೋರ್ಡ್, ರಿಫ್ಲೆಕ್ಟಿವ್ ಜಾಕೆಟ್‌ಗಳು, ಕೇನ್ ಶೀಲ್ಡ್, ಬಾಡಿ ಪ್ರೊಟೆಕ್ಟರ್‌ಗಳು ವಾಹನದಲ್ಲಿ ಇರುವ ಬಗ್ಗೆ ಹಾಗೂ ವಾಹನಕ್ಕೆ ಅಳವಡಿಸಿರುವ ಪಬ್ಲಿಕ್ ಅಡ್ರೆಸ್ ಸಿಸ್ಟಂ, ಸೈರನ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿದರು.
ವಾಹನಗಳ ಎಮಿಷನ್ ಪರೀಕ್ಷಾ ವರದಿ ಹಾಗೂ ವಾಹನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿದ ಅವರು, ಇಲಾಖಾ ವಾಹನಗಳನ್ನು ಹಂಚಿಕೆ ಮಾಡಿರುವ ಚಾಲಕರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ವಾಹನಗಳನ್ನು ಉತ್ತಮ ರೀತಿ ನಿರ್ವಹಣೆ ಮಾಡುವಂತೆ ಸೂಚಿಸಿದರು. ಇಲಾಖಾ ವಾಹನವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಚಾಲಕರನ್ನು ಪ್ರಶಂಸಿಸಿದರು.