

ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಕರೊನಾ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಸ್ಥಿತಿ ಗಂಭೀರವಾಗಿದ್ದರ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೀಗಿರುವಾಗಲೇ ಎಸ್ಪಿಬಿ ಚೇತರಿಸಿಕೊಂಡಿದ್ದಾರೆ. ವೆಂಟಿಲೇಟರ್ ಕಳಚಿ ಅವರೇ ಉಸಿರಾಡುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ, ಹಾಗೆ ಹರಿದಾಡಿದ ಸುದ್ದಿ ಸುಳ್ಳು ಎಂದು ಸ್ವತಃ ಎಸ್ಪಿಬಿ ಪುತ್ರ ಎಸ್ಪಿ. ಚರಣ್ ಹೇಳಿದ್ದರು. ಇದೀಗ ಎಂಜಿಎಂ ಆಸ್ಪತ್ರೆ ಕಡೆಯಿಂದ ಮತ್ತೊಂದು ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಮತ್ತೆ ವೀರಪ್ಪನ್ ಆದ ಕಿಶೋರ್ … ವೆಬ್ಸೀರೀಸ್ಗೆ ಚಾಲನೆ
‘ಎಸ್ಪಿಬಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ. ಈಗಲೂ ವೆಂಟಿಲೇಟರ್ ಮೂಲಕವೇ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿರವಾಗಿದೆ. ನಮ್ಮ ವಿಶೇಷ ವೈದ್ಯಕೀಯ ತಂಡ ಅವರ ಚೇತರಿಕೆಯ ಮೇಲೆಯೇ ಗಮನ ಇರಿಸಿದೆ. ಜತೆಗೆ ಅಂತಾರಾಷ್ಟ್ರೀಯ ಪರಣಿತ ವೈದ್ಯರ ಸಲಹೆಯನ್ನೂ ಪಡೆಯಲಾಗುತ್ತಿದೆ. ಆದರೆ, ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈನ ಎಂಜಿಎಂ ಹೆಲ್ತ್ಕೇರ್ನಲ್ಲಿ ಆಗಸ್ಟ್ 5ರಂದು ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್ಪಿಬಿ ಅವರನ್ನು ದಾಖಲಿಸಲಾಗಿತ್ತು. ಅಂದಿನಿಂದ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಕಳೆದೊಂದು ವಾರದಿಂದ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. (ಏಜೆನ್ಸೀಸ್)