

| ವಿಲಾಸ ಮೇಲಗಿರಿ ಬೆಂಗಳೂರು
ಕೃಷಿ ಮೇಲೆ ಕವಿದಿದ್ದ ಕರೊನಾ ಲಾಕ್ಡೌನ್ ನಿರ್ಬಂಧ ಸಡಿಲಗೊಂಡ ಬೆನ್ನಲ್ಲೇ ಮಳೆರಾಯ ಕೂಡ ಕೃಪೆ ತೋರಿರುವುದು ರಾಜ್ಯದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರೈತ ಸಮ್ಮಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಿರುವ ಸರ್ಕಾರ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟದ ವಿರುದ್ಧ ಸಮರ ಸಾರಿರುವ ಪರಿಣಾಮ ಮತ್ತಷ್ಟು ಉತ್ಸಾಹಗೊಂಡಿರುವ ರೈತರು ಮುಂಗಾರು ಪೂರ್ವ ಬಿತ್ತನೆ ಆರಂಭಿಸಿದ್ದಾರೆ. ಮೈಸೂರು, ಚಾಮರಾಜ ನಗರ, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಹೆಸರು, ಉದ್ದು, ತೊಗರಿ, ಅಲಸಂದೆ ಬಿತ್ತನೆಯಾಗುತ್ತಿದೆ. ಇದರ ಜತೆಗೆ ರಾಗಿ ಬೆಳೆಗೆ ಭೂಮಿ ಹದ ಮಾಡುವ ಕಾರ್ಯವೂ ಭರದಿಂದ ಸಾಗಿದೆ.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯಕರ್ನಾಟಕದ ಮಳೆ ಬಿದ್ದ ಪ್ರದೇಶಗಳಲ್ಲಿ ಕೃಷಿ ಋಷಿ ಖುಷಿಯಿಂದ ಮಾಗಿ ಉಳುಮೆ ಮಾಡಲು ಶುರು ಮಾಡಿದ್ದಾನೆ. ಮುಂಗಾರು ಪೂರ್ವ ಬಿತ್ತನೆಗೆ ಜೂನ್ ಅಂತ್ಯದವರೆಗೆ, ರಾಗಿ ಬಿತ್ತನೆಗೆ ಜುಲೈವರೆಗೂ ಅವಕಾಶವಿದೆ.
ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಹಾಗೂ ಕೃಷಿ ಉಪಯೋಗಿ ಯಂತ್ರಗಳ ಬಳಕೆಯ ಮೇಲಿನ ಲಾಕ್ಡೌನ್ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ಕೃಷಿ ಪರಿಕರ ಮತ್ತು ಬೀಜ, ಗೊಬ್ಬರ ಮಾರಾಟಗಾರರಿಗೆ ಗ್ರೀನ್ ಪಾಸ್ ಕೂಡ ವಿತರಿಸಲಾಗಿದೆ. ಹಾಗಾಗಿ ಕೃಷಿ ಯಂತ್ರಧಾರೆ ಯೋಜನೆ ಪ್ರಯೋಜನ ರೈತನಿಗೆ ದೊರೆಯುತ್ತಿದೆ.
ಬಿತ್ತನೆ ಬೀಜಕ್ಕಿಲ್ಲ ಬರ: ಮುಂಗಾರು ಬಿತ್ತನೆಗೆ ರಾಜ್ಯದ ರೈತರಿಗೆ 5.97 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆಯಿದೆ. ಆದರೆ, ಸರ್ಕಾರ ಮುಂಜಾಗ್ರತಾ ಕ್ರಮವಾಗಿ 7.29 ಲಕ್ಷ ಕ್ವಿಂ.ಬಿತ್ತನೆ ಬೀಜ ದಾಸ್ತಾನು ಮಾಡಿಟ್ಟಿದ್ದು, ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡುತ್ತಿದೆ. ಮೆಕ್ಕೆ ಜೋಳ, ಶೇಂಗಾ ಬಿತ್ತನೆ ಬೀಜದ ಕೊರತೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮುಂಗಾರು ಬಿತ್ತನೆ ಪ್ರದೇಶಗಳಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಗಿಸಲಾಗುತ್ತಿದೆ. 10-15 ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ಬೇಕಾದ ವ್ಯವಸ್ಥೆಗಳನ್ನು ಕೃಷಿ ಇಲಾಖೆ ಮಾಡುತ್ತಿದೆ.
ಸರ್ಕಾರ ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟದ ವಿರುದ್ಧ ಸಮರ ಸಾರಿದೆ. ದೃಢೀಕೃತವಲ್ಲದ 10-20ಕೋಟಿ ರೂ. ಮೌಲ್ಯದ ನೂರಾರು ಟನ್ ಬಿತ್ತನೆ ಬೀಜವನ್ನು ಕೃಷಿ ಇಲಾಖೆ ಅಧಿಕಾರಿಗಳ ವಶಪಡಿಸಿಕೊಂಡಿದ್ದಾರೆ. ನಕಲಿ ಬೀಜ, ಕೀಟನಾಶಕ ಮಾಫಿಯಾ ಮಟ್ಟ ಹಾಕಲು ದೊಡ್ಡ ಆಂದೋಲನವನ್ನೇ ಕೃಷಿ ಇಲಾಖೆ ಕೈಗೆತ್ತಿಕೊಂಡಿದ್ದು ನಕಲಿ ಬೀಜ ಮಾರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿದೆ.
ಫಸಲ್ ಭಿಮಾ ಯೋಜನೆಯಡಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತನ್ನ ಪಾಲಿನ 18.59 ಕೋಟಿ ರೂ.1.13 ಲಕ್ಷ ರೈತರಿಗೆ ಪ್ರಯೋಜನವಾಗಿದೆ. ಅದೇ ರೀತಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ 957 ಕೋಟಿ ಹಾಗೂ ರಾಜ್ಯದ ಪಾಲು 600 ಕೋಟಿ ರೂ. ಬಿಡುಗಡೆ ಮಾಡಿದೆ. ಫಲಾನುಭವಿ ರೈತರಿಗೆ ತಲಾ 2 ಸಾವಿರ ರೂ.ಗಳು ಖಾತೆಗೆ ಜಮೆಯಾಗಿದೆ.
ತೋಟಗಾರಿಕೆ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರಿದಿವೆ. ಹೂ ಬೆಳೆ ನಷ್ಟ ಸಮೀಕ್ಷೆ ನಡೆದಿದೆ. ಕಲ್ಲಂಗಡಿ, ಅನಾನಸ್ ಮತ್ತಿತರ ಹಣ್ಣು, ತರಕಾರಿ ಬೆಳೆ ನಷ್ಟ ಪರಿಹಾರ ಸರ್ಕಾರದ ಪರಿಶೀಲನೆಯಲ್ಲಿದೆ.
ಮುಂಗಾರು ಬಿತ್ತನೆಗೆ ರಾಜ್ಯಕ್ಕೆ ಸುಮಾರು 22.85 ಲಕ್ಷ ಮೆ.ಟನ್ ರಸಗೊಬ್ಬರದ ಅವಶ್ಯಕತೆಯಿದೆ. ಪ್ರಸ್ತುತ ಮುಂಗಾರು ಪೂರ್ವ ಬಿತ್ತನೆಗೆ ಏಪ್ರಿಲ್ನಲ್ಲೇ 2.57 ಲಕ್ಷ ಮೆ.ಟನ್ ರಸಗೊಬ್ಬರ ಬೇಡಿಕೆ ಇದ್ದು, 7.09 ಲಕ್ಷ ಮೆ.ಟನ್ ಕಾಪು ದಾಸ್ತಾನಿದೆ. ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಎಂಒಪಿ ಹೀಗೆ ಯಾವುದೇ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ರಸಗೊಬ್ಬರ ಹಂಚಿಕೆ ಮಾಡಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ರೈತನಲ್ಲಿ ಉತ್ಸಾಹ ತುಂಬಿದೆ. ಕೇಂದ್ರ ಹವಾಮಾನ ಇಲಾಖೆ ಕೂಡ ಸಾಧಾರಣ ಮುಂಗಾರು ಮಳೆ ಬೀಳುವ ಮುನ್ಸೂಚನೆ ನೀಡಿರುವುದರಿಂದ ರೈತ ಕೃಷಿ ಕಾಯಕದಲ್ಲಿ ತನ್ಮಯನಾಗಿದ್ದಾನೆ.
ಮುಂಗಾರು ಪೂರ್ವ ಬಿತ್ತನೆ ಪ್ರದೇಶಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ನಕಲಿ ಬೀಜ ಮತ್ತು ರಸಗೊಬ್ಬರ ಮಾರಾಟದ ವಿರುದ್ಧ ಸಮರ ಸಾರಿದ್ದೇವೆ. ಅಂತಹ ಪ್ರಕರಣ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. | ಬಿ.ವೈ.ಶ್ರೀನಿವಾಸ್, ನಿರ್ದೇಶಕರು, ಕೃಷಿ ಇಲಾಖೆ.