ಹಿಂದು ಮಂದಿರಗಳ ಮೇಲೆ ಮುಂದುವರಿದ ದಾಳಿ ಘಟನೆಗಳು; ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ದ್ವೇಷ ಬಿತ್ತನೆ

5-67cdd50163f9f
Published on

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುಷ್ಕರ್ವಿುಗಳಿಂದ ಹಿಂದು ಮಂದಿರಗಳ ಮೇಲೆ ಸರಣಿ ದಾಳಿಯಾದ ಕಹಿಘಟನೆಗಳು ಭಾರಿ ಕಳವಳ ಹುಟ್ಟುಹಾಕಿದ್ದವು. ಆದರೆ, ಪುಟ್ಟ ಭಾರತವೇ ನೆಲೆಸಿರುವ ಅಮೆರಿಕದಲ್ಲಿ ಮಂದಿರಗಳ ಮೇಲೆ ದಾಳಿ ಹೆಚ್ಚುತ್ತಿರುವುದು ಚಿಂತೆಯ ವಿಚಾರ. ಈ ಘಟನೆಗಳ ಹಿಂದೆ ಖಲಿಸ್ತಾನಿ ಚಳವಳಿಯ ಬೆಂಬಲಿಗರು ಇರುವುದನ್ನು ಭಾರತ ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ.

ಅಮೆರಿಕದಲ್ಲಿ ಆಡಳಿತ ಬದಲಾಗಿದೆ. ಇದೇ ವರ್ಷದ ಜನವರಿ 20ರಂದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಡೆಮೊಕ್ರಾಟಿಕ್ ಪಕ್ಷ ಅಧಿಕಾರದಲ್ಲಿದ್ದಾಗಿನ ಸ್ಥಿತಿಯೇ ಈಗಲೂ ಮುಂದುವರಿದಿರುವುದು ಕಹಿವಾಸ್ತವ. ಒಂದಿಲ್ಲೊಂದು ಕಾರಣಕ್ಕಾಗಿ ಭಾರತೀಯರ ಮೇಲಿನ ದ್ವೇಷ ಹೆಚ್ಚುತ್ತಲೇ ಇದೆ. ಭಾರತೀಯರು ತಮ್ಮ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಭಾರತೀಯ ಉದ್ಯೋಗಿಗಳನ್ನೇ ಗುರಿಯಾಗಿಸಿ ದಾಳಿಗಳು ನಡೆದಿದ್ದವು. ಅಷ್ಟೇ ಅಲ್ಲ, ಶುಲ್ಕ ತುಂಬುವ ಸಲುವಾಗಿ ಅರೆಕಾಲಿಕ ನೌಕರಿ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ಭೀಕರ ದಾಳಿ ನಡೆದಿದ್ದವು. ಮಾತ್ರವಲ್ಲ, ದಾಳಿಕೋರರು ‘ಐ ಹೇಟ್ ಇಂಡಿಯನ್ಸ್’ ಅಂತ ಬಹಿರಂಗವಾಗಿ ರೋಷ ಹೊರಹಾಕಿದ್ದರು.

ಮಂದಿರಗಳ ಮೇಲಿನ ದಾಳಿ ಕೂಡ ಹೊಸದೇನಲ್ಲ. ಆದರೆ, ಇಂಥ ಘಟನೆಗಳನ್ನು ಅಲ್ಲಿನ ಸ್ಥಳೀಯ ಆಡಳಿತಗಳು ತಡೆಯುತ್ತವೆ ಎಂಬ ನಂಬಿಕೆ ಹುಸಿಯಾಗಿದೆ. 2022ರಿಂದ ಈವರೆಗೆ ಕನಿಷ್ಠ 10 ಬಾರಿ ಮಂದಿರಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದು, ಹಿಂದುಗಳ ಮನಸ್ಸನ್ನು ಘಾಸಿಗೊಳಿಸಿದೆ. ಆದರೆ, ಅಮೆರಿಕದ ಮಾಧ್ಯಮಗಳು, ಪೊಲೀಸರು ಮತ್ತು ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಘಟನೆಗಳನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇದು ಹಿಂದುಗಳ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಖಲಿಸ್ತಾನಿ ಕೈವಾಡ

ಖಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿ ಭಾರತವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ತಲ್ಲಣ ಸೃಷ್ಟಿಸಿದೆ. ಆದರೆ, ಅಮೆರಿಕದಲ್ಲೂ ಖಲಿಸ್ತಾನಿ ಚಳವಳಿಯ ಬೆಂಬಲಿಗರು ದೊಡ್ಡಸಂಖ್ಯೆಯಲ್ಲಿದ್ದು, ಮಂದಿರಗಳ ಮೇಲಿನ ದಾಳಿಯಂಥ ಕೃತ್ಯಗಳ ಹಿಂದೆ ಅವರೇ ಇದ್ದಾರೆ ಎಂದು ಅಮೆರಿಕದ ಹಿಂದು ಸಂಘಟನೆಗಳು ಹೇಳಿವೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್​ನಲ್ಲಿ ಖಲಿಸ್ತಾನಿ ಆಂದೋಲನದ ಬೆಂಬಲಿಗರು ‘ಖಲಿಸ್ತಾನಿ ರೆಫರೆಂಡಮ್ ಅಂದರೆ ‘ಜನಾಭಿಪ್ರಾಯ ಸಂಗ್ರಹ’ವನ್ನು ಶೀಘ್ರದಲ್ಲೇ ನಡೆಸಲಿದ್ದಾರೆ. ಇದು ಯಾವುದೋ ಸ್ಥಳೀಯ ಸಮಸ್ಯೆಯ ಪರಿಹಾರಕ್ಕಲ್ಲ. ಬದಲಾಗಿ ಭಾರತದಲ್ಲಿನ ಪಂಜಾಬ್​ನ್ನು ಹೊರತುಪಡಿಸಿ, ಒಂದು ಸ್ವತಂತ್ರ ಖಲಿಸ್ತಾನಿ ರಾಜ್ಯಕ್ಕಾಗಿ ಇವರ ‘ಹೋರಾಟ’! ಇದೇ ವಿಷಯದ ಕುರಿತು ಬ್ರಿಟನ್, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ ನಡೆಸುವ ಪ್ರಹಸನ ನಡೆಸಲಾಗಿದೆ ಮತ್ತು ಅದರಿಂದ ಯಾವುದೇ ನಿಖರ ಫಲಿತಾಂಶ ಅಥವಾ ಬೆಂಬಲ ಖಲಿಸ್ತಾನಿ ಸಂಘಟನೆಗಳಿಗೆ ಪ್ರಾಪ್ತವಾಗಿಲ್ಲ. ಹೀಗಾಗಿ, ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ರೆಫರೆಂಡಮ್ ನಡೆಸಲು ಅವು ಮುಂದಾಗಿವೆ. ಅಲ್ಲದೆ, ಖಲಿಸ್ತಾನ್ ಚಳವಳಿಗೆ ಜಾಗತಿಕವಾಗಿ ಬೆಂಬಲ ಗಿಟ್ಟಿಸಿಕೊಳ್ಳಬೇಕೆಂಬ ಇರಾದೆಯೂ ಇಂಥ ಆಯೋಜನೆಗಳ ಹಿಂದಿದೆ. ಆದರೆ, ಇಂಥ ಪ್ರಯತ್ನಗಳು ಭಾರತದ ಏಕತೆ ಮತ್ತು ಅಖಂಡತೆಗೆ ಸವಾಲು ಒಡ್ಡುತ್ತವೆ ಎಂದು ಕೇಂದ್ರ ಸರ್ಕಾರ ಇಂಥ ಜನಾಭಿಪ್ರಾಯ ಸಂಗ್ರಹವನ್ನು ವಿರೋಧಿಸಿದೆ.

ಕ್ರಮಕ್ಕೆ ಆಗ್ರಹ

ಲಾಸ್ ಏಂಜಲೀಸ್​ನಲ್ಲಿ ‘ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹ’ ಆರಂಭಕ್ಕೆ ಕೆಲ ದಿನಗಳ ಮೊದಲೇ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್​ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರದ ಗೋಡೆಗಳ ಮೇಲೆ ಭಾರತವಿರೋಧಿ ಘೋಷಣೆ ಬರೆಯಲಾಗಿದೆ. ಇಂಥ ಘಟನೆಗಳನ್ನು ತಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಸಂಘಟನೆಗಳು ಆಗ್ರಹಿಸಿವೆ.

ಬಿಎಪಿಎಸ್​ನ ಮಂದಿರಗಳು...

ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆಯು (ಬಿಎಪಿಎಸ್) ಪ್ರಪಂಚದಾದ್ಯಂತ ಒಂದು ಸಾವಿರಕ್ಕೂ ಅಧಿಕ ಮಂದಿರಗಳನ್ನು ನಿರ್ವಿುಸಿದ್ದು, ಸನಾತನ ಸಂಸ್ಕೃತಿ ಮತ್ತು ಅದರ ಮೌಲ್ಯಗಳ ಪ್ರಚಾರದಲ್ಲಿ ತೊಡಗಿದೆ. ಎಲ್ಲ ದೇವಸ್ಥಾನಗಳು ಭವ್ಯ ಸ್ವರೂಪದಾಗಿದ್ದು, ನಿರಂತರವಾಗಿ ಧಾರ್ವಿುಕ, ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತಿವೆ. ಬಿಎಪಿಎಸ್ ಸಂಸ್ಥೆಗೆ ಭಕ್ತರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ದೆಹಲಿಯ ಅಕ್ಷರಧಾಮ್ ಗುಜರಾತ್ ಗಾಂಧಿನಗರದ ಅಕ್ಷರಧಾಮ್ ಕಳೆದ ವರ್ಷ ಅಬುಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಅಲ್ಲಿನ ಮೊದಲ ಹಿಂದು ಮಂದಿರವಾದ ಸ್ವಾಮಿ ನಾರಾಯಣ್ ಮಂದಿರ, ಆಸ್ಟ್ರೇಲಿಯಾ ಸಿಡ್ನಿಯ ಸ್ವಾಮಿ ನಾರಾಯಣ್ ಮಂದಿರ, ಅಮೆರಿಕ ರಾಬಿನ್ಸ್​ವಿಲೆಯ ಅಕ್ಷರಧಾಮ್ ಸೇರಿದಂತೆ ಹಲವು ಮಂದಿರಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗಿವೆ. ಖಲಿಸ್ತಾನಿ ಸಮರ್ಥಕರು ಬಿಎಪಿಎಸ್ ಸಂಸ್ಥೆ ಮಂದಿರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ಇದೇ ಕಾರಣಕ್ಕೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ ಮತ್ತು ಮಂದಿರಗಳು ಭೌತಿಕವಾಗಿ ವಿಶಾಲವಾಗಿದ್ದು, ಇವುಗಳನ್ನು ಗುರಿಯಾಗಿಸಿದರೆ ವಿರೋಧದ ದನಿ ಜಾಗತಿಕ ಮಟ್ಟದಲ್ಲಿ ಕೇಳಿಸಬಹುದು ಎಂಬ ಷಡ್ಯಂತ್ರ ಖಲಿಸ್ತಾನಿ ಸಂಘಟನೆಗಳದ್ದು.

ದೇವಾಲಯ ವಿರೂಪಗೊಳಿಸಿದ ಕಿಡಿಗೇಡಿಗಳು

ನ್ಯೂಯಾರ್ಕ್: ಅಮೆರಿಕದಲ್ಲಿ ಹಿಂದು ದೇವಾಲಯಗಳನ್ನು ವಿರೂಪಗೊಳಿಸುವ ಮತ್ತೊಂದು ದುಷ್ಕೃತ್ಯ ನಡೆದಿದ್ದು ಈ ಘಟನೆಯನ್ನು ಭಾರತ ಕಟುವಾಗಿ ಖಂಡಿಸಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡಿಯೋ ಕೌಂಟಿಯ ಚಿನೋ ಹಿಲ್ಸ್​ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದ ಮೇಲೆ ಶನಿವಾರ ಭಾರತ-ವಿರೋಧಿ ಘೊಷಣೆಗಳನ್ನು ಬರೆದು ವಿರೂಪಗೊಳಿಸಲಾಗಿದೆ ಎಂದು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆ (ಬಿಎಪಿಎಸ್) ಹೇಳಿದೆ. ಲಾಸ್ ಏಂಜಲಿಸ್ ಕೌಂಟಿಯ ಗಡಿಯಲ್ಲಿ ಚಿನೋ ಹಿಲ್ಸ್ ಇದೆ. ‘ಇನ್ನೂ ಒಂದು ಮಂದಿರವನ್ನು ಅಪವಿತ್ರಗೊಳಿಸಲಾಗಿದೆ. ಈ ಬಾರಿ ಚಿನೋ ಹಿಲ್ಸ್​ನಲ್ಲಿ ಈ ದುಷ್ಕೃತ್ಯ ನಡೆದಿದೆ. ದ್ವೇಷ ಕೃತ್ಯಗಳ ವಿರುದ್ಧ ಹಿಂದು ಸಮುದಾಯ ಒಗ್ಗಟ್ಟಿನಿಂದ ನಿಲ್ಲುತ್ತದೆ’ ಎಂದು ಬಿಎಪಿಎಸ್​ನ ಸಾರ್ವಜನಿಕ ವ್ಯವಹಾರಗಳ ವಿಭಾಗ ಎಕ್ಸ್ ಖಾತೆಯ ಪೋಸ್ಟ್​ನಲ್ಲಿ ಹೇಳಿದೆ.

ಭದ್ರತೆಗೆ ಆಗ್ರಹ: ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್​ನಲ್ಲಿರುವ ದೇವಾಲಯವನ್ನು ವಿರೂಪಗೊಳಿಸಿದ ಪ್ರಕರಣವನ್ನು ಗಮನಿಸಲಾಗಿದ್ದು ಇಂಥ ಕೃತ್ಯಗಳನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಪ್ರಾರ್ಥನಾ ಸ್ಥಳಗಳಲ್ಲಿ ಸೂಕ್ತ ಭದ್ರತೆಗೆ ಸ್ಥಳೀಯ ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್, ಬಾಬಾ ರಾಮದೇವ್ ಖಂಡನೆ

ಬಿಎಪಿಎಸ್ ಮಂದಿರದಲ್ಲಿ ನಡೆದ ದುಷ್ಕೃತ್ಯವನ್ನು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಖಂಡಿಸಿದ್ದಾರೆ. ಪತಂಜಲಿ ಆಯುರ್ವೆದದ ಸಹ-ಸಂಸ್ಥಾಪಕ, ಯೋಗಗುರು ಬಾಬಾ ರಾಮದೇವ್ ಕೂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಎಫ್​ಬಿಐ ಹಾಗೂ ಅದರ ನಿರ್ದೇಶಕ, ಭಾರತ ಮೂಲದ ಕಾಶ್ ಪಟೇಲ್​ರನ್ನು ಅಮೆರಿಕದ ಲಾಭೇತರ ಸಂಸ್ಥೆ ಹಿಂದು ಅಮೆರಿಕನ್ ಫೌಂಡೇಶನ್ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net