

ಕೋಲಾರ: ದೇಶದಲ್ಲಿ 2011ರ ಜನಗಣತಿ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದ್ದು, 2025ಕ್ಕೆ ಕ್ಷೇತ್ರಗಳ ಪುನರ್ ವಿಂಗಡನೆ ಆಗಬೇಕಿದೆ, ಕೇಂದ್ರದ ಅನ್ಯಾಯದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಸಮಾನ ಮನಸ್ಕ ಸ್ನೇಹಿತ ಬಳಗದಿಂದ ಲೋಕ ನಾಯಕ ಜೆ.ಪಿ.ವಿಚಾರ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಕ್ಕೂಟ ವ್ಯವಸ್ಥೆ ಉಳಿಸಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ರಾಜ್ಯಗಳು ಸದೃಢವಾದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ. ದಕ್ಷಿಣ ಭಾರತವು ಅಭಿವೃದ್ಧಿ ಪಥದತ್ತ ಸಾಗಲು ಈ ಹಿಂದೆ ತಮಿಳುನಾಡಿನಲ್ಲಿ ಆಯೋಜಿಸಿದ್ದ ಜನಾಂದೋಲನ ಪ್ರಯತ್ನವೇ ಕಾರಣವಾಯಿತು ಎಂದರು.
ಒಕ್ಕೂಟ ವ್ಯವಸ್ಥೆ ಉಳಿಸುವ ಆಂದೋಲನದ ಕುರಿತು ದೇಶ ನಿರ್ಮಾಣದ ಹೊಣೆ ಹೊರಬೇಕಾಗಿರುವ ಹೊಸ ತಲೆಮಾರಿನ ಯುವಪೀಳಿಗೆಗೆ ಅರಿವು ಮೂಡಿಸಬೇಕಿದೆ. ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ, ಜೆಪಿ, ಮೌಲನ ಕುರಿತು ತಿಳಿಸಿಕೊಡಬೇಕಾಗಿದೆ ಎಂದರು.
ಮಹನೀಯರ ಕೊಡುಗೆಗಳ ಕುರಿತು ತಿಳಿಸುವ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆಗಳನ್ನು ಸದೃಢಪಡಿಸಬೇಕು. ದೇಶದಲ್ಲಿ ಏಕತೆ, ಐಕ್ಯತೆ, ಅಭಿವೃದ್ಧಿಗಳನ್ನು ಒಳಗೊಂಡು ರಚಿಸಿರುವ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಂಡು ಗಟ್ಟಿಗೊಳಿಸಲು ಹೋರಾಟಗಳು ನಿರಂತರವಾಗಿ ಮುಂದುವರೆಸಬೇಕಾಗಿದೆ ಎಂದರು.
ವಿಚಾರವಾದಿ ಡಾ.ಎಚ್.ವಿ.ವಾಸು ಮಾತನಾಡಿ, ಕೇಂದ್ರದಿಂದ ರಾಜ್ಯಗಳ ಮೇಲಿನ ದಾಳಿಗೆ ಜನರ ಪ್ರತಿರೋಧದ ವಿರುದ್ಧ ಜನತೆಯನ್ನು ಎಚ್ಚರಗೊಳಿಸುವುದೇ ಒಕ್ಕೂಟ ವ್ಯವಸ್ಥೆ ಉಳಿಸಿ ಆಂದೋಲನ ಮುಖ್ಯ ಉದ್ದೇಶ ಎಂದು ತಿಳಿಸಿದರು.
ರಾಷ್ಟದ ೧೬ನೇ ಹಣಕಾಸು ಯೋಜನೆಯ ಹಂಚಿಕೆಯಲ್ಲಿ ಕೇಂದ್ರದಿAದ ರಾಜ್ಯಕ್ಕೆ ಅನ್ಯಾಯವಾಗುವುದನ್ನು ನಿಯಂತ್ರಿಸಲು ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯೇತರ 8 ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾವೇಶ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆ ಉಳಿಸಲು ಆಂದೋಲನ ಮಾಡಲು ಮುಂದಾಗಿರುವುದುದು ಸ್ವಾಗತಾರ್ಹ ಎಂದರು.
ಹಿಂದೆ ಆದಿವಾಸಿಗಳ ದಂಗೆ, ರೈತರು ಮತ್ತು ಕಾರ್ಮಿಕರ ಹೋರಾಟದ ಫಲವಾಗಿ ಸಂವಿಧಾನ ರಚನೆಗೆ ಪ್ರೇರಣೆಯಾಯಿತು. ಅದೇ ಮಾದರಿಯಲ್ಲಿ ಕೇಂದ್ರದಿಂದ ರಾಜ್ಯಗಳ ಮೇಲಿನ ದಾಳಿಗೆ ಜನರ ಪ್ರತಿರೋಧ ವ್ಯಕ್ತಪಡಿಸಲು ಒಕ್ಕೂಟ ವ್ಯವಸ್ಥೆ ಉಳಿಸುವ ಆಂದೋಲನವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜೆಪಿ ವೇದಿಕೆಯ ಅಧ್ಯಕ್ಷ ದಯಾನಂದ್, ಮುಖಂಡರಾದ ಕೆ.ವಿ.ಗೌತಮ್, ಶ್ರೀಕೃಷ್ಣ, ಟಿ.ವಿಜಯಕುಮಾರ್, ಮೌಲಿ ಮುಜುಬಿನ್ ರೆಹಮಾನ್, ಉಮಾ ಶಂಕರ್, ಅನ್ವರ್‌ಪಾಷಾ ಇದ್ದರು.