

ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಹಿನ್ನೆಲೆಯಲ್ಲಿ ಹಾಲಿ ಕಾರ್ಯಾಚರಿಸುತ್ತಿರುವ ಹತ್ತು ವಿಶೇಷ ರೈಲುಗಳ ಸೇವೆಯನ್ನು ಮುಂಬರುವ ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಎಲ್ಲ ಹತ್ತೂ ರೈಲುಗಳು ಸಪ್ತಾಹಿಕ ಹಾಗೂ ದ್ವಿ ಸಪ್ತಾಹಿಕ ರೈಲುಗಳಾಗಿವೆ. ಈ ರೈಲುಗಳು ಯಶವಂತಪುರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಬೈಯಪ್ಪನಹಳ್ಳಿ) ಆಗಮನ/ನಿರ್ಗಮನ ಸೇವೆಯನ್ನು ಹೊಂದಿರುತ್ತವೆ. ಪ್ರತೀ ಭಾನುವಾರ, ಸೋಮವಾರದಂದು ಕಾರ್ಯಾಚರಿಸುವ ದಾನಾಪುರ-ಸರ್ ಎಂವಿಟಿ ರೈಲು ಹಾಗೂ ಪ್ರತೀ ಮಂಗಳವಾರ, ಬುಧವಾರ ಕಾರ್ಯಾಚರಿಸುವ ಸರ್ ಎಂವಿಟಿ-ದಾನಾಪುರ ರೈಲು ದ್ವಿ ಸಪ್ತಾಹಿಕವಾಗಿದ್ದು, ಉಳಿದವು ಸಪ್ತಾಹಿಕ ರೈಲುಗಳಾಗಿವೆ. ಯಶವಂತಪುರ-ಬರೌನಿ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆ ಅ.3ರ ವರೆಗೆ ವಿಸ್ತರಿಸಿದ್ದು, ಉಳಿದವು ಸೆಪ್ಟೆಂಬರ್ ತಿಂಗಳವರೆಗೆ ಪ್ರಯಾಣಿಕರಿಗೆ ಸೌಲಭ್ಯ ಸಿಗಲಿದೆ.
ಈ ರೈಲುಗಳು ಪರಿಷ್ಕೃತ ಬೋಗಿಗಳ ಸಂಯೋಜನೆಯೊಂದಿಗೆ ಚಲಿಸುತ್ತಿವೆ. ಇವು ತಲಾ ಎರಡು ಎಸಿ ಟು ಟೈಯರ್ ಬೋಗಿ, ನಾಲ್ಕು ಎಸಿ ತ್ರಿ ಟೈಯರ್ ಬೋಗಿ, 12 ಸ್ಲೀಪರ್ ಕ್ಲಾಸ್ ಬೋಗಿ, 3 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿ ಮತ್ತು 2 ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ ಒಟ್ಟು 23 ಬೋಗಿಗಳು ಹೊಂದಿರಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.