

ಬೆಂಗಳೂರು: ವಂದೇ ಭಾರತ್ ಪ್ರಯಾಣ ದರ ಪರಿಷ್ಕರಣೆ ಬಗ್ಗೆ ಚಿಂತನೆ ನಡೆದಿಲ್ಲ. ಎಲ್ಲ ವರ್ಗದ ಜನರಿಗೆ ರೈಲ್ವೆ ಪ್ರಯಾಣವನ್ನು ಅನುಕೂಲವಾಗಿಸುವ ಹಿನ್ನೆಲೆಯಲ್ಲಿ ಇತರೆ ರೈಲುಗಳಿಗೆ ಹೆಚ್ಚುವರಿ ಜನರಲ್ ಕೋಚ್ಗಳನ್ನು ಅಳವಡಿಸುವ ಚಿಂತನೆಯಿದೆ ಎಂದು ನೈಋತ್ಯ ರೈಲ್ವೆ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ.
ವಂದೇ ಭಾರತ್ ಸೇರಿ ಇತರೆ ರೈಲುಗಳ ಪ್ರಯಾಣ ದರ ಪರಿಷ್ಕರಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ್ದರು. ರೈತರು, ಮಧ್ಯಮವರ್ಗದ ಜನರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಗಮನದಲ್ಲಿಟ್ಟುಕೊಂಡು ರೈಲುಗಳ ದರವನ್ನು ಪರಿಷ್ಕರಣೆ ಮಾಡಬೇಕಿದೆ. ಬಡವರಿಗೂ ಒಂದೇ ಭಾರತ್ ರೈಲುಗಳಲ್ಲಿ ಸಂಚರಿಸಬೇಕು ಎನ್ನುವ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಲ್ಲಿ ಮಾತನಾಡುವುದಾಗಿ ಭರವಸೆ ನೀಡಿದ್ದರು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ನ ದರ ಹೆಚ್ಚಿದ್ದು ಸಾಮಾನ್ಯ ಜನರಿಗೆ ಅನುಕೂಲವಾಗುವ ರೈಲುಗಳನ್ನು ಓಡಿಸಬೇಕು ಎಂದು ಮಾಧ್ಯಮದವರೊಬ್ಬರು ತಿಳಿಸಿದಾಗ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಕರ್ನಾಟಕದ ಹಳ್ಳಿ-ಹಳ್ಳಿಗೂ ರೈಲ್ವೆ ಸಂಪರ್ಕ ವೃದ್ಧಿಸಿ, ಬಡವರ ಹಾಗೂ ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ರೈಲ್ವೆ ಪ್ರಯಾಣ ಸೌಲಭ್ಯ ಕಲ್ಪಿಸುವ ದೃಷ್ಟಿಯಲ್ಲಿ ಸಚಿವರು ಮಾತನಾಡಿದ್ದಾರೆ. ಇತರೆ ರೈಲುಗಳಿಗೆ ಹೆಚ್ಚುವರಿ ಜನರಲ್ ಕೋಚ್ಗಳನ್ನು ಅಳವಡಿಸುವ ಮೂಲಕ ಸಾಮಾನ್ಯ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಚಿಂತನೆಯಿದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟನೆ ನೀಡಿದೆ.