ಲಾಕ್​ಡೌನ್ ಇಲ್ಲದೆ ಕರೊನಾ ಗೆದ್ದ ದಕ್ಷಿಣ ಕೊರಿಯಾ

Corona Suddi samagra
Published on

ನವದೆಹಲಿ: ಯಾವುದೇ ನಗರಗಳನ್ನು ಲಾಕ್​ಡೌನ್ ಮಾಡಲಿಲ್ಲ, ಸಾರಿಗೆ ಸಂಚಾರ ನಿರ್ಬಂಧಿಸಲಿಲ್ಲ. ಅಂತಾರಾಷ್ಟ್ರೀಯ ಗಡಿಗಳು ಇನ್ನೂ ಮುಕ್ತವಾಗಿವೆ. ಅದ್ದಾಗ್ಯೂ ಈ ದೇಶ ಜಾಗತಿಕ ಮಹಾಮಾರಿ ಕರೊನಾ ವೈರಸ್ ಮೇಲೆ ದಿಗ್ವಿಜಯ ಸಾಧಿಸಿದೆ.

ಹೌದು, ಇದು ಏಷ್ಯಾದ ಐದು ಕೋಟಿ ಜನಸಂಖ್ಯೆಯ ಪುಟ್ಟ ರಾಷ್ಟ್ರ ದಕ್ಷಿಣ ಕೊರಿಯಾದ ಯಶೋಗಾಥೆ. ಜಗತ್ತಿನ ಬಹುತೇಕ ದೇಶಗಳು ಆತಂಕದಿಂದ ಅನುಸರಿಸಿದ ಯಾವುದೇ ಹಾದಿಯನ್ನು ತುಳಿಯದೇ ದಕ್ಷಿಣ ಕೊರಿಯಾ ಕೋವಿಡ್-19ಗೆ ಮೂಗುದಾರ ಹಾಕಿದೆ. ಸೋಂಕು ತಗಲಿದ 9,137 ಜನರ ಪೈಕಿ ಶೇಕಡಾ 41 ಜನರನ್ನು ಗುಣಮುಖಗೊಳಿಸಿ ಸಾವಿನ ಸಂಖ್ಯೆಯನ್ನು 131ಕ್ಕಷ್ಟೆ ಸೀಮಿತಗೊಳಿಸಿದ ದಕ್ಷಿಣ ಕೊರಿಯಾ ಈ ವಿಚಾರದಲ್ಲಿ ಮಾದರಿ ಹಾಕಿಕೊಟ್ಟಿದೆ.

9,137 ದೃಢಪಟ್ಟ ಸೋಂಕಿತರ ಪೈಕಿ 3,730 ಜನರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇವರೆಲ್ಲರು ಸಂಪೂರ್ಣವಾಗಿ ಗುಣಮುಖ ಹೊಂದಿದ್ದಾರೆಂದು ಮಯೊಂಗ್ಜಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮತ್ತು ಕೊರಿಯಾ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ. ಲೀ ವಾಂಗ್-ಜುನ್ ತಿಳಿಸಿದ್ದಾರೆ. ವಿಶ್ವ ಸಂಸ್ಥೆಯ ವಿಪತ್ತು ಅಪಾಯ ಕಡಿಮೆಗೊಳಿಸುವ (ಯುಎನ್​ಡಿಪಿಆರ್) ಕಚೇರಿ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಏರ್ಪಡಿಸಿದ್ದ ವಿಶೇಷ ವಿಡಿಯೋ ಕಾನ್ಪರೆನ್ಸ್​ನಲ್ಲಿ ಈ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಕೊರಿಯಾದ ಅನುಭವವನ್ನು ತಿಳಿಯಲು 105 ದೇಶಗಳ ಸುಮಾರು 900 ವಿಪತ್ತು ನಿರ್ವಹಣೆ ಹಾಗೂ ಆರೋಗ್ಯ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದರು.

ಕೊರಿಯಾ ಯಶಸ್ಸಿನ ನಾಲ್ಕು ಸೂತ್ರಗಳು

ಪಾರದರ್ಶಕತೆ: ಹೊಸದಾಗಿ ಸೋಂಕಿತ ಪ್ರಕರಣದ ಮಾಹಿತಿ ಹಂಚಿಕೊಳ್ಳುವಲ್ಲಿ ಪಾರದರ್ಶಕತೆ. ಸೋಂಕು ಪತ್ತೆಯಾದಾಗಲೆಲ್ಲ ಆರೋಗ್ಯ ಮತ್ತು ಇತರ ಅಧಿಕಾರಿಗಳ ನಡುವೆ ಅದರ ಮಾಹಿತಿ ವಿನಿಮಯ.

ನಿಯಂತ್ರಣ ಮತ್ತು ಕಡಿಮೆಗೊಳಿಸುವಿಕೆ

2019ರ ಡಿಸೆಂಬರ್ 30ರಂದು ಚೀನಾದಲ್ಲಿ ಕರೊನಾ ಸೋಂಕಿನ ಮೊದಲ ಪ್ರಕರಣ ವರದಿಯಾದಾಗಲೇ ದಕ್ಷಿಣ ಕೊರಿಯಾದಲ್ಲಿ ಅದರ ನಿಯಂತ್ರಣಕ್ಕೆ ಕ್ರಮದ ಆರಂಭ. ಸೋಂಕಿತ ರೋಗಿಗಳನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸುವ (ಐಸೊಲೇಷನ್) ಕ್ರಮಕ್ಕೆ ಹೆಚ್ಚಿನ ಗಮನ.

ಮುಖ್ಯ ಅಸ್ತ್ರ: ಸೋಂಕು ಪತ್ತೆ ಹಚ್ಚುವ ಕಿಟ್​ಗಳು ಪ್ರಧಾನ ಅಸ್ತ್ರ. ಬೃಹತ್ ಪ್ರಮಾಣದ ತಪಾಸಣೆ, ಡ್ರೈವ್ ಥ್ರೂ ಮತ್ತು ವಾಕ್ ಥ್ರೂ ತಪಾಸಣೆ ಕೇಂದ್ರಗಳ ಸ್ಥಾಪನೆ. ಪ್ರತಿ ವಾರ 100 ಪ್ರಯೋಗಾಲಯಗಳ ಮೂಲಕ ಹಗಲೂ ರಾತ್ರಿ 4.30 ಲಕ್ಷ ಜನರ ಪರೀಕ್ಷೆ.

2015ರ ಮಾದರಿ ಅನುಷ್ಠಾನ

2015ರಲ್ಲಿ ಮಧ್ಯ ಪ್ರಾಚ್ಯ ಉಸಿರಾಟ ಸೋಂಕು ( ಎಂಇಆರ್​ಎಸ್) ಸ್ಪೋಟಗೊಂಡಾಗ ಅಭಿವೃದ್ಧಿಪಡಿಸಿದ ಆದ್ಯತೆ (ಟ್ರಯೇಜ್) ಮತ್ತು ಚಿಕಿತ್ಸೆ ವ್ಯವಸ್ಥೆಯ ಅನುಷ್ಠಾನ. ತುಂಬಾ ಗಂಭೀರ ಪ್ರಕರಣಗಳಿಗಾಗಿ ಐದು ಐಸೋಲೇಷನ್ ಆಸ್ಪತ್ರೆಗಳ ನಿರ್ವಣ. ಸೋಂಕಿನ ಲಕ್ಷಣ ಹಾಗೂ ಸಾಧಾರಣ ಸೋಂಕಿರುವವರನ್ನು ಸಾಮುದಾಯಿಕ ಆಸ್ಪತ್ರೆಗಳ ಜಾಲಕ್ಕೆ ರವಾನೆ. ಹೋಟೆಲ್​ಗಳು, ಜಿಮ್ಳು ಮತ್ತು ವಸತಿ ಕೇಂದ್ರಗಳು ಹೊಸ ಆಸ್ಪತ್ರೆಗಳಾಗಿ ಮಾರ್ಪಾಡು.

ಸಾಮಾಜಿಕ ಅಂತರದ ಅಭಿಯಾನ

25 ಲಕ್ಷ ಜನಸಂಖ್ಯೆಯ ಡೇಗು ಪಟ್ಟಣದಲ್ಲಿ ಫೆಬ್ರವರಿ ಕೊನೆ ಭಾಗದಲ್ಲಿ ಕರೊನಾ ವೈರಸ್ ಸೋಂಕು ಅತಿಯಾದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಭಿಯಾನ ನಡೆಸುವ ಮೂಲಕ ಸೋಂಕನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು. ಎರಡುವರೆ ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿ ಸಿಯೋಲ್​ನಲ್ಲಿ 75 ಸೋಂಕಿತರು ಪತ್ತೆಯಾಗಿದ್ದರು. ಆದರೆ ಡೇಗುನಲ್ಲಿ ಒಂದೇ ದಿನ 735 ಸೋಂಕು ಪೀಡಿತರು ಪತ್ತೆಯಾಗಿದ್ದರು. ಆದರೆ ಸಾಮುದಾಯಿಕ ಸೋಂಕು ಡೇಗುಗಷ್ಟೆ ಸೀಮಿತಗೊಳಿಸುವಲ್ಲಿ ದಕ್ಷಿಣ ಕೊರಿಯಾ ಅಧಿಕಾರಿಗಳು ಸಫಲರಾದರು. ಎಲ್ಲ ಶಾಲೆಗಳನ್ನು ಮುಚ್ಚಲು ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಕಾರ್ಯಕ್ರಮಗಳ ಮೇಲೆ ಸ್ವಯಂಪ್ರೇರಿತ ನಿರ್ಬಂಧ ಹೇರಲು ದಕ್ಷಿಣ ಕೊರಿಯಾ ನಿರ್ಧರಿಸಿತ್ತಾದರೂ ಯಾವುದೇ ನಗರವನ್ನು ಲಾಕ್​ಡೌನ್​ಗೆ ಒಳಪಡಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net