

ಮುಂಬೈ: ದೇಶದಲ್ಲಿ ಕಿಲ್ಲರ್ ಕರೊನಾ ವೈರಸ್ ಮೊದಲ ಟೆಸ್ಟಿಂಗ್ ಕಿಟ್ ತಯಾರಿಸಿದ ಕೀರ್ತಿ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ ಡಾ. ಮಿನಾಲ್ ದಖವೇ ಭೋಸಲೆ ನೇತೃತ್ವದ ತಂಡಕ್ಕೆ ಸಲ್ಲುತ್ತದೆ. ಮೆಚ್ಚುಗೆ ಸೂಚಿಸುವಂತಹ ವಿಚಾರವೆಂದರೆ ಕಿಟ್ ತಯಾರಿಸುವಾಗ ಮಿನಾಲ್ ಕೊನೆಯ ಹಂತದ ಗರ್ಭಿಣಿಯಾಗಿದ್ದರು.
ಮೌಲ್ಯಮಾಪನಕ್ಕಾಗಿ ಟೆಸ್ಟಿಂಗ್ ಕಿಟ್ ಅನ್ನು ಅಧಿಕಾರಿಗಳಿಗೆ ನೀಡುವ ಒಂದು ದಿನದ ಮುಂಚೆಯೇ ಮಿನಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಬಗ್ಗೆ ಮಾತನಾಡಿರುವ ಅವರು ಇದೊಂದು ರೀತಿಯಲ್ಲಿ ಎರಡು ಮಗುವಿಗೆ ಜನ್ಮ ನೀಡಿದಂತಾಯಿತು ಎಂದಿದ್ದಾರೆ. ಕಿಟ್ ತಯಾರಿಕೆ ಮತ್ತು ಗರ್ಭಿಣಿಯಾವಸ್ಥೆ ಒಂದೇ ಹಳಿಯ ಮೇಲೆ ಸಾಗಿತು. ಎಲ್ಲಿಯೂ ಕೂಡ ಯಾವುದೇ ತೊಂದರೆಗಳು ಎದುರಾಗಲಿಲ್ಲ ಎಂದು ಮಿನಾಲ್ ತಿಳಿಸಿದ್ದಾರೆ.
ಗರ್ಭಿಣಿಯಾಗಿ ಟೆಸ್ಟಿಂಗ್ ಕಿಟ್ ತಯಾರಿಸುವಾಗ ಒಂದಿಷ್ಟು ತೊಡಕುಗಳಾಯಿತು. ಸಿಸೇರಿಯನ್ ಮೂಲಕ ಹೆರಿಗೆ ನಡೆಯಿತು. ಕರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ಜನರಿಗೆ ನೆರವು ನೀಡಲು ಇದೊಂದ ಒಳ್ಳೆಯ ಸಮಯ ಅನಿಸಿತು. ಹೀಗಾಗಿ ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ಟೆಸ್ಟಿಂಗ್ ಕಿಟ್ ತಯಾರಿಕೆಗೆ ಮುಂದಾದೆ ಎಂದು ಹೇಳಿದ್ದಾರೆ.
ಇದೇ ಕ್ಷೇತ್ರದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಸೇವೆಯ ಅಗತ್ಯ ಹೆಚ್ಚಾಗಿರುತ್ತದೆ. ಹೀಗಿರುವಾಗ ನಾನು ಗರ್ಭಿಣಿ ಎಂದು ಸುಮ್ಮನಾದರೆ ಏನು ಉಪಯೋಗ ಎಂದು ಪ್ರಶ್ನಿಸಿದರು. ಕಿಟ್ ತಯಾರಿಕ ಸಮಯದಲ್ಲಿ ಗರ್ಭಿಣಿಯಾಗಿದ್ದರಿಂದ ಮಿನಾಲ್ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ, ಪುಣೆಯ ಮೈಲ್ಯಾಬ್ ಡಿಸ್ಕವರಿಯಲ್ಲಿ ಕಿಟ್ ಯೋಜನೆ ಮೇಲೆ ಕೆಲಸ ಮಾಡುತ್ತಿದ್ದ ತಂಡದ 10 ಸದಸ್ಯರಿಗೆ ಮಿನಾಲ್ ಮಾರ್ಗದರ್ಶನ ಮಾಡುತ್ತಿದ್ದರು.
ಹತ್ತು ವರ್ಷಗಳಿಂದ ತಮ್ಮ ತಂಡದ ಜತೆ ಒಳ್ಳೆಯ ಸಂಬಂಧ ಇರುವುದರಿಂದ ಕಿಟ್ ತಯಾರಿಕೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎನ್ನತ್ತಾರೆ ಮಿನಾಲ್. ದೇಶಕ್ಕಾಗಿ ಸೇವೆಯೊಂದನ್ನು ಮಾಡಿದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ತಂಡ ನೀಡಿರುವ ಟೆಸ್ಟಿಂಗ್ ಕಿಟ್, 2.5 ಗಂಟೆಗಳಲ್ಲಿ ಫಲಿತಾಂಶವನ್ನು ನೀಡುತ್ತದೆ. ಅದಕ್ಕೂ ಮುನ್ನ 8 ಗಂಟೆಗಳಾಗುತ್ತಿತ್ತು.
ಅಂದಹಾಗೆ ಮಿನಾಲ್ ಅವರು ಪುಣೆಯ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ನಲ್ಲಿ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ ಹಾಗೂ ರೀಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಚೀಫ್ ಆಗಿದ್ದಾರೆ. 2009ರಲ್ಲಿ ಸ್ಪೋಟಗೊಂಡ ಸ್ವೈನ್ ಫ್ಲ್ಯೂ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. (ಏಜೆನ್ಸೀಸ್)