ಶೀಘ್ರದಲ್ಲಿ ಭೂಮಿಯಿಂದಲೇ ಕಣ್ಮರೆಯಾಗಲಿದೆ ದಕ್ಷಿಣ ಕೊರಿಯಾ!? ಇಲ್ಲಿದೆ ನೋಡಿ ಆಘಾತಕಾರಿ ಸಂಗತಿ | South Korea

South Korea
Published on

South Korea : ನವೀನ ತಂತ್ರಜ್ಞಾನ ಮತ್ತು ವಿಶ್ವ ಪ್ರಸಿದ್ಧ ಸೌಂದರ್ಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾ ಮುಂದಿನ ದಿನಗಳಲ್ಲಿ ಭೂಮಿಯಿಂದಲೇ ಕಣ್ಮರೆಯಾಗಲಿದೆ ಎಂಬ ವದಂತಿಗಳು ಎಲ್ಲೆಡೆ ಹರಡುತ್ತಿವೆ.

ಒಂದು ಕಾಲದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಆಧುನೀಕರಣದ ಅಭಿವೃದ್ಧಿಯಲ್ಲಿ ಉದಾಹರಣೆಯಾಗಿ ನಿಂತಿದ್ದ ದಕ್ಷಿಣ ಕೊರಿಯಾ, ಇದೀಗ ತೀವ್ರ ಫಲವತ್ತತೆ ಬಿಕ್ಕಟ್ಟಿನೊಂದಿಗೆ ಪರದಾಡುತ್ತಿದೆ. ಹೌದು, ದಕ್ಷಿಣ ಕೊರಿಯಾ ಪ್ರಸ್ತುತ ತೀವ್ರ ಜನಸಂಖ್ಯೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರಿಯಾದ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಪ್ರಸ್ತುತ, ದಕ್ಷಿಣ ಕೊರಿಯಾ 52 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಈ ಶತಮಾನದ ಅಂತ್ಯದ ವೇಳೆಗೆ ಜನಸಂಖ್ಯೆಯು 17 ಮಿಲಿಯನ್ ಅಥವಾ 14 ಮಿಲಿಯನ್‌ಗೆ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕುಟುಂಬ ಯೋಜನೆ ನೀತಿಯನ್ನು ಜಾರಿಗೊಳಿಸಿದ ಬಳಿಕ ದಕ್ಷಿಣ ಕೊರಿಯಾದ ಫಲವತ್ತತೆಯ ಕುಸಿತವು ಪ್ರಾರಂಭವಾಯಿತು. 1960ರ ದಶಕದಲ್ಲಿ, ಆರ್ಥಿಕ ಅಭಿವೃದ್ಧಿಯನ್ನು ಮೀರಿ ನಿಂತ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸಿದ ಕೊರಿಯಾ ಸರ್ಕಾರ ಜನನ ಪ್ರಮಾಣವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಸ್ಥಾಪಿಸಿತು. ಅದು ಹಾಗೇ ಮುಂದುವರಿಯುತ್ತಾ ಬಂದಿದೆ.

ಮೂರನೇ ಒಂದು ಭಾಗದಷ್ಟು ಕೊರಿಯನ್​ ಮಹಿಳೆಯರು ಮದುವೆಯಾಗಲು ಬಯಸುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ 2024ರ ಸಮೀಕ್ಷೆಯಲ್ಲಿ ಬಯಲಾಗಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಕುಟುಂಬವನ್ನು ಪ್ರಾರಂಭಿಸುವುದಕ್ಕಿಂತ ವೃತ್ತಿಜೀವನದ ಪ್ರಗತಿಗೆ ಆದ್ಯತೆ ನೀಡುತ್ತಾರೆ. 2023ರ ಸರ್ಕಾರಿ ಸಮೀಕ್ಷೆಯು ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಪ್ರಾಥಮಿಕ ತಡೆಗೋಡೆಯಾಗಿ ವೈವಾಹಿಕ ಜೀವನ ನಿಲ್ಲಲಿದೆ ಎಂದು ಭಾವಿಸಿದ್ದಾರೆಂದು ಬಹಿರಂಗಪಡಿಸಿದೆ.

ಇದಿಷ್ಟೇ ಅಲ್ಲದೆ, ಮದುವೆ ಅಂದರೆ ಹಿಂದೇಟು ಹಾಕಲು ಶೇ. 93 ರಷ್ಟು ಮನೆಕೆಲಸ ಮತ್ತು ಮಕ್ಕಳ ಆರೈಕೆಯ ಹೊರೆಯೇ ಕಾರಣವೆಂದು ಹೇಳಲಾಗಿದೆ. ಹೀಗಾಗಿ ಅನೇಕ ದಕ್ಷಿಣ ಕೊರಿಯಾದ ಪುರುಷರು ವಿಯೆಟ್ನಾಂನಂತಹ ದೇಶಗಳ ಮಹಿಳೆಯರನ್ನು ಮದುವೆಯಾಗುತ್ತಿದ್ದಾರೆ. ಅಲ್ಲದೆ, ಜನನ ಪ್ರಮಾಣವನ್ನು ಹೆಚ್ಚಿಸಲು ಕೊರಿಯನ್ ಸರ್ಕಾರ ಹಲವು ನೀತಿಗಳನ್ನು ಜಾರಿಗೆ ತಂದಿದೆ.

ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಗಂಡಸರಿಗೆ ತೆರಿಗೆ ವಿನಾಯಿತಿ, ಶಿಶುಪಾಲನಾ ಸಬ್ಸಿಡಿ ಮತ್ತು ಮಿಲಿಟರಿ ಸೇವಾ ವಿನಾಯಿತಿಗಳನ್ನು ನೀಡಲಾಗಿದೆ. ಅಲ್ಲದೆ, ಹಣಕಾಸಿನ ನೆರವು ಸಹ ನೀಡಲಾಗುತ್ತಿದೆ. ಆದಾಗ್ಯೂ, ಇದು ಹೆಚ್ಚು ಪ್ರಭಾವ ಬೀರಿಲ್ಲ. ಈ ಪರಿಸ್ಥಿತಿಯು ಮುಂದುವರಿದರೆ ಶತಮಾನದ ಅಂತ್ಯದ ವೇಳೆಗೆ ಕೊರಿಯಾ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಕುಗ್ಗುವ ಅಪಾಯವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net