ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಪದಗ್ರಹಣ

soumya reddy
Published on

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಜವಾಬ್ದಾರಿ ವಹಿಸಿಕೊಂಡರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ, ಸಾರಿಗೆ ಸಚಿವ ರಾಮ ಲಿಂಗಾ ರೆಡ್ಡಿ ಸೇರಿ ಹಲವು ಸಚಿವರು, ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು (ಮಹಿಳೆಯರು) ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುವುದನ್ನು ಮುಂದುವರೆಸುತ್ತೇವೆ 2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಮುಂದುವರೆಸುತ್ತೇವೆ ಎಂದು ೋಷಿಸಿದರು.
ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯರೆಡ್ಡಿಯವರಿಗೆ ಇದ್ದು ಈ ದಿಕ್ಕಿನಲ್ಲಿ ಮುಂದುವರೆಯಿರಿ ಎಂದು ಕರೆ ನೀಡಿದರು.
ಬಿಜೆಪಿ ಪಕ್ಷವೇ ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದು ನಾವು. ಇದನ್ನು ವಿರೋಧಿಸಿದ್ದು ಬಿಜೆಪಿ. ರಾಜ್ಯದ ಒಂದು ಕೋಟಿ 21 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು ಆರ್ಥಿಕ ಶಕ್ತಿ ನೀಡುತ್ತಿರುವುದು ನಾವು. ಬಿಜೆಪಿಯವರು ಅತ್ತೆ ಸೊಸೆ ಜಗಳ ಆಡುತ್ತಾರೆ ಎನ್ನುವ ಸುಳ್ಳು ನೆಪ ಮುಂದಿಟ್ಟು ಮಹಿಳೆಯರ ಖಾತೆಗೆ ಹೋಗುವ ಹಣವನ್ನು ನಿಲ್ಲಿಸಲು ಷಡ್ಯಂತ್ರ ನಡೆಸಿತು. ಆದರೆ ಗೃಹಲಕ್ಷ್ಮಿ ಹಣದಲ್ಲಿ ಅತ್ತೆ ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ವಿವರಿಸಿದರು.
ಬಿಜೆಪಿಯವರು ಅನ್ನಭಾಗ್ಯವನ್ನೂ ವಿರೋಧಿಸುತ್ತಾರೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆಯನ್ನೂ ವಿರೋಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀವೇ ನೀಡಬೇಕು ಎಂದ ಅವರು ಸಂವಿಧಾನವನ್ನು ಬಿಜೆಪಿ ವಿರೋಧಿಸುತ್ತದೆ. ಬಿಜೆಪಿಯವರ ಗುರೂಜಿ ಸಾವರ್ಕರ್ ಸಂವಿಧಾನ ವಿರೋಧಿಸಿದ್ದರು. ಈ ಇತಿಹಾಸವನ್ನು ರಾಜ್ಯದ ಮಹಿಳೆಯರು, ಯುವತಿಯರಿಗೆ ಸರಿಯಾಗಿ ಮನದಟ್ಟು ಮಾಡಿಸಬೇಕೆಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರಾಜಕಾರಣದಲ್ಲಿ ಮಹಿಳೆಯರಿಗೆ ಸಹನೆ ಬೇಕು, ಜನರಲ್ಲಿ ಹಾಗೂ ಕಾರ್ಯಕರ್ತರಲ್ಲಿ ನಮ್ಮ ನಾಯಕತ್ವದ ಗುಣಗಳನ್ನು ಮೂಡಿಸಬೇಕು, ಕೇವಲ ಕಾಟಾಚಾರಕ್ಕಾಗಿ ರಾಜಕೀಯಕ್ಕೆ ಯಾರೂ ಬರಬಾರದು. ಹಾಗೆಯೇ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕು ಎನ್ನುವುದು ನನ್ನ ಅಪೇಕ್ಷೆ ಎಂದರು.
ನಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿದ್ದು, ಮುಂದಿನ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಶಾಸಕ ಎನ್.ಎ.ಹ್ಯಾರಿಸ್, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ರಾಣಿ ಸತೀಶ್, ಮೋಟಮ್ಮ ಮಾಜಿ ಅಧ್ಯಕ್ಷರಾದ ಪುಷ್ಪ ಅಮರ್‌ನಾಥ್, ಮಂಜುಳಾ ನಾಯ್ಡು, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net