

| ಶಿವಪ್ಪ ಹಿತ್ಲರ್ ಸೊರಬ
ಒಬ್ಬ ಸರ್ಕಾರಿ ಅಧಿಕಾರಿ ನಿವೃತ್ತನಾದರೆ ಹೆಚ್ಚೆಂದರೆ ಅಲ್ಲಿಯ ಹಿರಿಯ ಹಾಗೂ ಕಿರಿಯ ಸಿಬ್ಬಂದಿ ಸೇರಿಕೊಂಡು ಶಾಲು ಹೊದಿಸಿ ಸನ್ಮಾನ ಮಾಡಿ ನಿವೃತ್ತಿ ಜೀವನಕ್ಕೆ ಶುಭ ಕೋರಬಹುದು. ಆದರೆ ಸೊರಬದ ರೇಷ್ಮೆ ನಿರೀಕ್ಷಕ ಬಿ.ಟಿ.ನಾಯ್ಕ್ ಅವರಿಗೆ ಬೆಳ್ಳಿ, ಬಂಗಾರದ ಉಡುಗೊರೆ ನೀಡಿದ ರೈತರು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.
ಶಿರಸಿಯ ಬಾಲಚಂದ್ರ ತಿಮ್ಮಪ್ಪ ನಾಯ್ಕ್ 1986ರಲ್ಲಿ ಪ್ರಥಮವಾಗಿ ನಂಜನಗೂಡಿನಲ್ಲಿ ರೇಷ್ಮೆ ಇಲಾಖೆ ಸೇರಿದರು. ಪ್ರತಿ ದಿನ ರೈತರ ಬಗ್ಗೆ ಯೋಚಿಸುತ್ತ ಅವರ ಜತೆಯಲ್ಲೇ ಇದ್ದು ಕಾಲಕಾಲಕ್ಕೆ ಮಾಹಿತಿ ನೀಡುತ್ತ ಅವರ ಬೆಳೆಗೆ ಬೇಕಾದ ಸವಲತ್ತು ಹಾಗೂ ಸರ್ಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಕೊಡಿಸುವ ಮೂಲಕ ಸೈ ಎನಿಸಿಕೊಂಡರು. 2006ರಲ್ಲಿ ಸೊರಬಕ್ಕೆ ವರ್ಗವಾಗಿ ಬಂದ ನಂತರ ರೈತರಲ್ಲಿ ಜಾಗೃತಿ ಮೂಡಿಸಿ ತಾಲೂಕಿನ ರೇಷ್ಮೆ ಬೆಳೆಗಾರರು ಇಂದು ಲಕ್ಷ ಲಕ್ಷ ರೂ. ಆದಾಯ ಪಡೆಯಲು ಕಾರಣರಾಗಿದ್ದಾರೆ. ಜತೆಗೆ ಅವರ ಪ್ರೀತಿಗೂ ಪಾತ್ರರಾಗಿದ್ದಾರೆ.
ಸೊರಬದ ಹಿರೇಶಕುನದಲ್ಲಿ ರೇಷ್ಮೆ ವಿಸ್ತರಣೆ ಹಾಗೂ ಚಾಕಿ ಸಂಕೀರ್ಣ, 10 ಎಕರೆ ಜಮೀನು, ಒಂದು ಕಟ್ಟಡ ಹೊಂದುವ ಮೂಲಕ ರೇಷ್ಮೆ ಇಲಾಖೆ ಕಾರ್ಯನಿರ್ವಹಿಸುತ್ತಿತ್ತು. ಇದೊಂದು ಉಪಯೋಗಕ್ಕೆ ಬಾರದ ಇಲಾಖೆ. ಇಲಾಖೆಯನ್ನೇ ತಾಲೂಕಿನಿಂದ ತೆಗೆದುಹಾಕುವಂತೆ 2002ರಲ್ಲಿ ಶಾಸಕರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿತ್ತು. ನಂತರ ಶಿವಮೊಗ್ಗದಿಂದಲೇ ಅಧಿಕಾರಗಳು ನಿಯೋಜನೆಗೊಂಡು ತಾಲೂಕಿನ ರೇಷ್ಮೆ ಬೆಳೆಗೆ ಗಮನ ಹರಿಸಿದರು.
2006ರ ಆಗಸ್ಟ್ನಲ್ಲಿ ಬಿ.ಟಿ.ನಾಯ್ಕ್ ನಿಯೋಜನೆಗೊಂಡು ಬಂದಾಗ ತಾಲೂಕಿನ ದ್ವಾರಹಳ್ಳಿಯಲ್ಲಿ ಕೇವಲ 2 ಎಕರೆಯಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿತ್ತು. ಬಳಿಕ ತಾಲೂಕಿನ ಉಳವಿ ಹೋಬಳಿಯ ಕೈಸೋಡಿ, ಮೈಸಾವಿ ರೈತರನ್ನು ರೇಷ್ಮೆ ಬೆಳೆಯತ್ತ ಆಕರ್ಷಿಸಿದರು. ಇಲ್ಲಿನ ರೈತರು ರೇಷ್ಮೆ ಬೆಳೆಯಲು ಮುಂದಾಗುವ ಮೂಲಕ ಆ ಗ್ರಾಮಗಳು ಮೂರ್ನಾಲ್ಕು ವರ್ಷಗಳಲ್ಲಿ ಬಂಗಾರ ಬೆಳೆಯುವ ನಾಡು ಎಂದೇ ಖ್ಯಾತಿ ಪಡೆದು ಆರ್ಥಿಕವಾಗಿ ಸದೃಢವಾದವು. ನಂತರದಲ್ಲಿ ತಳೆಬೈಲು, ಹಾಲಗಳಲೆ, ನಿಸರಾಣಿ ಸೇರಿದಂತೆ ಎಲ್ಲ ಹೋಬಳಿಗಳಿಗೆ ಬೆಳೆ ವಿಸ್ತರಿಸುವ ಮೂಲಕ ತಾಲೂಕಿನಲ್ಲಿ ಇಂದು ಅತಿಹೆಚ್ಚು ಬೇಡಿಕೆ ಇರುವ ದ್ವಿತಳಿ ಬಿತ್ತನೆ ಹಾಗೂ ಸಂಕಿರಣ ಗೂಡುಗಳನ್ನು 29 ಗ್ರಾಮದ 100 ರೈತರು 140 ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುವಂತೆ ಮಾಡಿದರು. ಈಗ ವಾರ್ಷಿಕ 30 ಸಾವಿರ ಚಾಕಿ ಮೊಟ್ಟೆಯಿಂದ 26 ಸಾವಿರ ಕೆಜಿ ಗೂಡನ್ನು ತೆಗೆಯಲಾಗುತ್ತಿದೆ. ಅಲ್ಲದೆ ರಾಜ್ಯದ 46ನೇ ಕ್ಲಸ್ಟರ್ ಆಗಿ ಗುರುತಿಸಿಕೊಂಡಿದೆ.
ಇದಕ್ಕೆಲ್ಲ ಕಾರಣರಾದ ನಿರೀಕ್ಷಕ ಬಿ.ಟಿ.ನಾಯ್ಕ್ ನ.30ರಂದು ಸೇವಾ ನಿವೃತ್ತಿ ಆಗುತ್ತಿದ್ದಾರೆ. ಹೀಗಾಗಿ ನ.23ರಂದು ತಾಲೂಕಿನ ರೇಷ್ಮೆ ಬೆಳೆಗಾರರು ಸೊರಬದಲ್ಲಿ ಹಾರ ತುರಾಯಿ, ಬಂಗಾರದ ಉಂಗುರ, ಬೆಳ್ಳಿ ಕಡಗೊಂದಿಗೆ ಸನ್ಮಾನಿಸಿದರು. ರೈತರೆಲ್ಲ ಸೇರಿ ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದರು.
ಸೊರಬ ತಾಲೂಕಿನಲ್ಲಿ ಜೀವನದ ಅವಲಂಬನೆಗೆ ಯಾವುದೇ ಕೈಗಾರಿಕೆ ಇಲ್ಲ. ರೈತಾಪಿ ವರ್ಗ ಸಣ್ಣ ಹಿಡುವಳಿದಾರರಾಗಿದ್ದು ಇರುವ ಸ್ವಲ್ಪ ಭೂಮಿಯಲ್ಲಿ ರೇಷ್ಮೆ ಬೆಳೆಯಲು ಅವಕಾಶ ಮಾಡಿಕೊಟ್ಟರೆ ಬಡತನದಿಂದ ಮೇಲೆ ಬರಲು ಸಾಧ್ಯ. ರೈತರು ಅಧಿಕಾರಿಗಳಿಂದ ಉತ್ತಮ ಸಹಕಾರ ನಿರೀಸುತ್ತಾರೆ. ಅದು ಹುಸಿಯಾಗದಿರಲಿ ಎಂಬುದು ನಮ್ಮ ಆಸೆ.
| ಬಿ.ಟಿ.ನಾಯ್ಕ್ ರೇಷ್ಮೆ ನಿರೀಕ್ಷಕ
ರೇಷ್ಮೆ ಬೆಳೆ ವಿಸ್ತರಣೆಯಲ್ಲಿ ನಾಯ್ಕ್ ಅವರು ಬಹಳ ಶ್ರಮವಹಿಸಿದ್ದಾರೆ. ಅವರು ಸರ್ಕಾರದಿಂದ ಬರುವ ಸೌಲಭ್ಯವನ್ನು ಚಾಚೂ ತಪ್ಪದೆ ರೈತರಿಗೆ ತಲುಪಿಸುತ್ತಾರೆ. ಬೆಳೆಗಾರರ ಜತೆ ನಿರಂತರ ಇದ್ದು ಉತ್ತಮ ಮಾರ್ಗದರ್ಶನ ಮಾಡುತ್ತಾರೆ. ಅವರ ನಿವೃತ್ತಿಯಿಂದ ರೇಷ್ಮೆ ಬೆಳೆಗಾರರು ಅನಾಥರಾದಂತೆ ಅನಿಸುತ್ತಿದೆ.
| ಬಿಷ್ಟಪ್ಪ ಕೈಸೋಡಿ ರೇಷ್ಮೆ ಬೆಳೆಗಾರ