

ಸೊರಬ: ಮಳೆಯಿಂದಾಗಿ ತಾಲೂಕಿನಾದ್ಯಂತ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ವಾಹನಗಳ ಸಂಚಾರ ದುಸ್ತರವಾಗಿದೆ. ತಾಲೂಕಿನಲ್ಲಿ 219 ಕಿ.ಮೀ ರಾಜ್ಯ ಹೆದ್ದಾರಿಯಲ್ಲಿ 9.2 ಕಿ.ಮೀ ರಸ್ತೆ ಗುಂಡಿ ಬಿದ್ದು ಹಾಳಾಗಿವೆ. 10.78 ಕಿ.ಮೀ ಜಿಲ್ಲಾ ಮುಖ್ಯರಸ್ತೆ ಮಳೆಯಿಂದ ಹಾಳಾಗಿದ್ದು ಗುಂಡಿ ಮುಚ್ಚುವ ಕೆಲಸ ನಡೆಯಬೇಕಿದೆ.
ತಾಲೂಕಿನ ಸುರಣಿಗೆ ಹಾಗೂ ಕೊಡಿಕೊಪ್ಪದ ಬಳಿ ಮೋರಿ ಹಾಳಾಗಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ತೋಟಗಾರಿಕೆ ಇಲಾಖೆಯ ಎದುರು ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿವೆ. ಆದರೆ ಈವರೆಗೂ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಈ ರಸ್ತೆಯ ಮಾವಲಿ, ಬಿಳವಾಣಿ ಹಾಗೂ ಸುತ್ತುಕೋಟೆ ಗ್ರಾಮಗಳ ಬಳಿಯೂ ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳು ಉಂಟಾಗಿ ನೀರು ತುಂಬಿಕೊಂಡಿವೆ. ವಾಹನ ಸವಾರರಿಗೆ ಗುಂಡಿಯ ಆಳ ತಿಳಿಯದೆ ಅವಘಡಗಳು ಸಂಭವಿಸುತ್ತಿವೆ.
ಸೊರಬ-ಸಾಗರ ರಸ್ತೆಯ ಕೆಇಬಿ ಕಚೇರಿ ಬಳಿ, ಗುಂಡಪ್ಪನ ತೆಗ್ಗು, ಸಪ್ಪಿನಮಲ್ಲಮನ ಏರಿಯಲ್ಲಿ ರಸ್ತೆಯಲ್ಲಿ ಮೊಳಕೈ ಉದ್ದದಷ್ಟು ಗುಂಡಿಗಳು ಬಿದ್ದಿವೆ. ಸೊರಬ-ಆನವಟ್ಟಿ ಮಾರ್ಗದ ಹಳೇ ಸೊರಬದ ಎರಡು ಕೆರೆ ಏರಿಗಳ ಮೇಲೆ, ಚಿತ್ರಟ್ಟೆಹಳ್ಳಿ, ಬಿಳವಗೋಡು ತಗ್ಗಿನಲ್ಲಿ ಕಂದಕಗಳು ನಿರ್ಮಾಣವಾಗಿವೆ. ಗ್ರಾಮೀಣ ರಸ್ತೆಗಳಾದ ಶಿಗ್ಗಾ ಮಳಲಿಕೊಪ್ಪ ರಸ್ತೆ, ಜಡೆ-ತಲಗಡ್ಡೆ ಬಂಕಸಾಣ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ಹರಸಾಹಸ ಪಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.