

ಸೊರಬ: ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಮಹತ್ವದ ಇತಿಹಾಸವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿದಲ್ಲಿ ಸರ್ಕಾರಕ್ಕೆ ಇನ್ನೂ ಹೆಚ್ಚು ಆದಾಯ ಬರುತ್ತದೆ. ಹೀಗಾಗಿ ವರ್ಷದೊಳಗೆ ವಿಶೇಷ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಸಿದ್ಧತೆ ನಡೆದಿದೆ. ಸಂಬಂಧಿಸಿದ ಇಲಾಖೆಗಳು ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಚಂದ್ರಗುತ್ತಿ ದೇವಸ್ಥಾನದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನ ಸೋರುವುದು, ಬಾಗಿಲುಗಳ ದುರಸ್ತಿ, ದೇವಸ್ಥಾನ ಆವರಣ ಹಾಗೂ ಸರತಿಯಲ್ಲಿ ನಿಲ್ಲುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಯಾಗಶಾಲೆ ನಿರ್ಮಾಣ, ಗೋಪುರ ದುರಸ್ತಿ ಮತ್ತು ಸುತ್ತಲು ಮೆಸ್ ನಿರ್ಮಾಣ, ದೇವಸ್ಥಾನ ಹೆಸರಿನ ನಾಮಲಕ ಅಳವಡಿಕೆ, ಸೇವಾ ಕೌಂಟರ್, ಕಾಯಿ ಒಡೆಯಲು ವಿಶೇಷ ವ್ಯವಸ್ಥೆ, ಚಪ್ಪಲಿ ಸ್ಟ್ಯಾಂಡ್, ಮೆಟ್ಟಿಲುಗಳ ನಿರ್ಮಾಣ ಬಗ್ಗೆ
ಸಂಬಂಧಿಸಿದ ಅಧಿಕಾರಿಗಳ ಜತೆ ಸಚಿವ ಮಧು ಬಂಗಾರಪ್ಪ ಸುದೀರ್ಘ ಚರ್ಚೆ ನಡೆಸಿ, ಇಲ್ಲಿನ ಸಂಸ್ಕೃತಿಗೆ ದಕ್ಕೆಯಾಗದಂತೆ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.
ಪ್ರತಿಕ್ರಯಿಸಿದ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿ ನಂದು, ದೇವಸ್ಥಾನ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಆದರೆ ದೇವಾಲಯ ಮೆಟ್ಟಿಲುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಇಲಾಖೆಯಲ್ಲಿ ತೊಡಕುಗಳಿವೆ ಎಂದಾಗ, ಅಂಜನಾದ್ರಿ ಬೆಟ್ಟಕ್ಕೆ ಹತ್ತಲು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಕಾನೂನು ತೊಡಕು ನಿವಾರಿಸಿ ಭಕ್ತರಿಗೆ ಅನುಕೂಲವಾಗುವಂತೆ ಕಾಮಗಾರಿ ಮಾಡಬೇಕು. ವಿದ್ಯುತ್ ಅಲಂಕಾರಕ್ಕೂ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್, ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ, ತಾಪಂ ಇಒ ಡಾ. ಪ್ರದೀಪ್ ಕುಮಾರ್, ದೇವಸ್ಥಾನ ಕಾರ್ಯನಿರ್ವಾಹಣಾ ಅಧಿಕಾರಿ ಪ್ರಮೀಳಾ, ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ರೇಣುಕಾಪ್ರಸಾದ್, ಎಸಿಎ್ ಮೋಹನ್ ಕುಮಾರ್, ಪ್ರಾಚ್ಯ ವಸ್ತು ಇಲಾಖೆಯ ಮುರುಳಿ ಮೋಹನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ,ಎಚ್.ಗಣಪತಿ, ಎನ್.ಜಿ.ನಾಗರಾಜ್, ಜಯಶೀಲಪ್ಪ ಗೌಡ ಸೇರಿದಂತೆ ಅಧಿಕಾರಿಗಳು ಇತರರಿದ್ದರು.
ಇದಕ್ಕೂ ಮೊದಲು ಸಚಿವ ಮಧು ಬಂಗಾರಪ್ಪ ಅವರು ಬೆಟ್ಟ ಏರಿ ರೇಣುಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.