ಹಿಮಯಮನಿಗೆ ಬಲಿಯಾದ ಕುಟುಂಬಕ್ಕೆ ದಾರಿ ದೀಪವಾದ ಸೋನು ಸೂದ್​! 4 ಹೆಣ್ಣು ಮಕ್ಕಳಿಗೆ ಗಾಡ್​ ಫಾದರ್​

ಸೊನು
Published on

ಡೆಹ್ರಡೂನ್​: ಈ ತಿಂಗಳ ಮೊದಲ ವಾರದಲ್ಲಿ ಉತ್ತರಾಖಂಡದಲ್ಲಿ ನಡೆದ ಹಿಮ ಪ್ರವಾಹದಿಂದಾಗಿ ಅನೇಕರು ಪ್ರಾಣ ಬಿಟ್ಟಿದ್ದರು. ಲಾಕ್​ಡೌನ್​ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿ ದೇವರೆನಿಸಿಕೊಂಡ ನಟ ಸೋನು ಸೂದ್​ ಇದೀಗ ಹಿಮಪಾತದಲ್ಲಿ ಮೃತರಾದವರ ಕುಟುಂಬಕ್ಕೂ ಗಾಡ್​ ಫಾದರ್​ ಆಗಿದ್ದಾರೆ.

ಅಲಾಂ ಸಿಂಗ್​ ಪುಂದಿರ್​ (45) ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದು, ತಪೋವನ್​ ಜನ ವಿದ್ಯುತ್​ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆ ಯೋಜನೆಯೇ ನೀರಿನಲ್ಲಿ ಕೊಚ್ಚಿಕೊ0ಡು ಹೋದ ಹಿನ್ನೆಲೆಯಲ್ಲಿ ಅವರೂ ನೀರಿನ ಪಾಲಾಗಿದ್ದರು. ಅವರ ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.

ಈ ಕುಟುಂಬದ ನೋವನ್ನು ಅರಿತ ಸೋನು ಸೂದ್​ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಆ ನಾಲ್ಕು ಹೆಣ್ಣು ಮಕ್ಕಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಅಂಚಲಾ (14) ಅಂತರ (11) ಕಾಜಲ್ (8) ಮತ್ತು ಅನಾನ್ಯ ಹೆಸರಿನ ನಾಲ್ಕು ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಅವರೇ ಭರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಆ ಕುಟುಂಬದ ಸಂಪೂರ್ಣ ಜೀವನ ನಿರ್ವಹಣೆ ಹಣವನ್ನು ಸೋನು ಸೂದ್​ ನೀಡಲಿದ್ದಾರೆ.

ಹಿಮ ಪ್ರವಾಹದಿಂದಾಗಿ ನನ್ನ ಕುಟುಂಬದ ಯಜಮಾನನೇ ನಮ್ಮನ್ನು ಬಿಟ್ಟು ಹೋದರು. ಸಂಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ಸೋನು ಸೂದ್​ ಅವರು ಗಾಡ್​ ಫಾದರ್​ ರೂಪದಲ್ಲಿ ಬಂದಿದ್ದಾರೆ ಎಂದು ಸರೋಜಿನಿ ದೇವಿ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net