

ಮುಂಬೈ: ಡೀಪ್ ಫೇಕ್ ವಿಡಿಯೋಗಳಿಂದಾಗಿ ಈಗಾಗಲೇ ಹಲವು ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆ ಪಟ್ಟಿಗೆ ಬಾಲಿವುಡ್ ನಟ ಸೋನು ಸೂದ್ ಕೂಡ ಸೇರಿಕೊಂಡಿದ್ದಾರೆ.
ಕಷ್ಟಕಾಲದಲ್ಲಿ ಅನೇಕ ಜನರ ಬೆಂಬಲಕ್ಕೆ ನಿಂತ ಅವರು ನಿಜವಾದ ಹೀರೋ ಎನಿಸಿಕೊಂಡರು. ಆದರೆ ಈಗ ಕೆಲವು ಕಿಡಿಗೇಡಿಗಳು ಅವರ ನಕಲಿ ವಿಡಿಯೋ ಮಾಡಿ ಅಭಿಮಾನಿಗಳಿಗೆ ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೋನುಸೂದ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.
'ಕೆಲವರು ನನ್ನ ಬಗ್ಗೆ ಡೀಪ್ ಫೇಕ್ ವೀಡಿಯೋ ಸೃಷ್ಟಿಸಿ ಅಭಿಮಾನಿಗಳ ಜೊತೆ ಚಾಟ್ ಮತ್ತು ವಿಡಿಯೋ ಕಾಲ್ ಮಾಡಿ ಹಣ ವಸೂಲಿಗೆ ಯತ್ನಿಸುತ್ತಿದ್ದಾರೆ. ಆ ವಿಡಿಯೋದಲ್ಲಿರುವುದು ನಾನೇ ಎಂದುಕೊಂಡು ಹಲವು ಅಮಾಯಕರು ಸೈಬರ್ ಅಪರಾಧಿಗಳ ಬಲೆಗೆ ಬೀಳುತ್ತಾರೆ. ಇಂತಹ ವಿಡಿಯೋ ಕರೆಗಳು ಬಂದರೆ ನಂಬಬೇಡಿ. ಹುಷಾರಾಗಿರಿ' ಎಂದು ಕೇಳಿಕೊಂಡರು.
ನಿಜ ಜೀವನದಲ್ಲಿ ನಡೆದ ಇಂತಹುದೇ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ‘ಫತೇ’ ಸಿನಿಮಾ ಮಾಡುತ್ತಿದ್ದೇನೆ. ಡೀಪ್ ಫೇಕ್ ಮತ್ತು ಲೋನ್ ಆಪ್‌ಗಳಿಂದ ಆಗುತ್ತಿರುವ ಸೈಬರ್ ಅಪರಾಧಗಳನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.
ಮೊದಲಿಗೆ ರಶ್ಮಿಕಾ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಅದರ ನಂತರ ಆಲಿಯಾ ಭಟ್, ಕಾಜೋಲ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ನಕಲಿ ವೀಡಿಯೊಗಳು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಯಿತು. ಇತ್ತೀಚಿಗೆ ಕ್ರಿಕೆಟ್ ದಿಗ್ಗಜ ಸಚಿನ್ ಕೂಡ ಇದರಿಂದ ನಲುಗಿದ್ದಾರೆ. ಈ ಬಗ್ಗೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನು ತಡೆಯಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.