

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಅಖಾಡಕ್ಕೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್, ಇಂದು (ಮಾರ್ಚ್ 12) 43 ಅಭ್ಯರ್ಥಿಗಳನ್ನು ಒಳಗೊಂಡ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂವರು ಮಾಜಿ ಸಿಎಂ ಪುತ್ರರಿಗೆ ಸ್ಥಾನ ನೀಡಲಾಗಿದೆ.
ಪಟ್ಟಿಯಲ್ಲಿ ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್ ಒಳಗೊಂಡಂತೆ ಪಕ್ಷದ ಹಿರಿಯ ನಾಯಕರ ಮಕ್ಕಳಿಗೂ ಸ್ಥಾನ ನೀಡಲಾಗಿದೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪುತ್ರ ನಕುಲ್ ನಾಥ್ಗೆ ಮಧ್ಯಪ್ರದೇಶದ ಚಿಂದ್ವಾರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇವರು ಕ್ಷೇತ್ರದ ಹಾಲಿ ಸಂಸದರು ಸಹ ಆಗಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ಗೆ ರಾಜಸ್ಥಾನದ ಜಲೋರ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾವೊಬ್ಬ ಅಭ್ಯರ್ಥಿಯ ಹೆಸರೂ ಕೂಡ ಇಲ್ಲ. ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಹಾಗೂ ದಮನ್ ಮತ್ತು ದಿಯು ಪ್ರದೇಶಗಳ ಕೆಲವು ಕ್ಷೇತ್ರಗಳನ್ನು ಮಾತ್ರ ಪರಿಗಣಿಸಲಾಗಿದೆ.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್ ಅವರನ್ನು ಜೋರ್ಹತ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಗೊಗೊಯ್ ಅವರು ಕಲಿಯಾಬೋರ್ ಕ್ಷೇತ್ರದ ಹಾಲಿ ಸಂಸದರು ಆಗಿದ್ದಾರೆ.
ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಅಸ್ಸಾಂನಿಂದ 12, ಗುಜರಾತ್‌ನಿಂದ 7, ಮಧ್ಯಪ್ರದೇಶದಿಂದ 10, ರಾಜಸ್ಥಾನದಿಂದ 10 ಮತ್ತು ದಮನ್ ಮತ್ತು ದಿಯುನಿಂದ 1 ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಾರ, ಪಟ್ಟಿಯಲ್ಲಿ ಶೇ.76.7ರಷ್ಟು ಅಭ್ಯರ್ಥಿಗಳು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ.
ಕಾಂಗ್ರೆಸ್ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾ ಶಿವರಾತ್ರಿ ಶುಭದಿನದಂದು ಬಿಡುಗಡೆ ಮಾಡಿತು. ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.
ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ:
* ವಿಜಯಪುರ: ಎಚ್.ಆರ್.ಅಲಗೂರು
* ಶಿವಮೊಗ್ಗ: ಗೀತಾ ಶಿವರಾಜ್ಕುಮಾರ್
* ಹಾಸನ: ಶ್ರೇಯಸ್ ಪಾಟೀಲ್
* ತುಮಕೂರು: ಎಸ್ಪಿ ಮುದ್ದಹನುಮೇಗೌಡ
* ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್
* ಹಾವೇರಿ: ಆನಂದ್ಸ್ವಾಮಿ ಗಡ್ಡ ದೇವರಮಠ
* ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)