

ಬೆಂಗಳೂರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಾಗಿ ರಾಜ್ಯ ಸರ್ಕಾರವು ಬದಲಾಯಿಸುತ್ತಿರುವುದು ‘ಸ್ಟೇಟ್ ಎಜುಕೇಷನ್ ಪಾಲಿಸಿ’ ಅಲ್ಲ, ಸೋನಿಯಾ ಗಾಂಧಿ ಎಜುಕೇಷನ್ ಪಾಲಿಸಿ (ಎಸ್‌ಇಪಿ) ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಪೀಪಲ್ಸ್ ಫೋರಂ ಆಫ್ ಕರ್ನಾಟಕ ಎಜುಕೇಷನ್ ಸಂಘಟನೆಯು ಮಂಗಳವಾರ ಅರಮನೆ ರಸ್ತೆಯಲ್ಲಿರುವ ಸ್ವೌಟ್ಸ್ ಆೃಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಶಿಕ್ಷಣ ತಜ್ಞರ ಸಭೆ’ಯಲ್ಲಿ ಅವರು ಮಾತನಾಡಿದರು.
ಎನ್‌ಇಪಿ ಬಗ್ಗೆ ಚರ್ಚಿಸಿ ಅನಗತ್ಯವಾದ ವಿಚಾರಗಳನ್ನು ತೆಗೆದು ಉಳಿದ ವಿಷಯಗಳನ್ನು ಅಳವಡಿಸಿಕೊಳ್ಳಬೇಕು. ಆದರೆ, ಅಧಿಕಾರಕ್ಕೆ ಬಂದ ಮೂರೇ ತಿಂಗಳಿನಲ್ಲಿ ಸಾರಾಸಗಟಾಗಿ ನೀತಿಯನ್ನು ತೆಗೆಯಲು ಹೊರಟಿದ್ದಾರೆ. ಆದರೆ, ಜನಶಕ್ತಿ ಮತ್ತು ರಾಜ್ಯಶಕ್ತಿಗೆ ಸಂಘರ್ಷವಾದಗಲೆಲ್ಲ ಜನಶಕ್ತಿಯೇ ಗೆದ್ದಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ತಿಳಿದು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ‘ಜನಾಂದೋಲನ’ವಾಗುವುದು ನಿಶ್ಚಿತ ಎಂದು ಎಚ್ಚರಿಸಿದರು.
ಡಿಸಿಎಂ, ಸಚಿವರ ಸಂಸ್ಥೆಗಳಲ್ಲಿ ಕೈಬಿಡ್ತಾರಾ?
ಎಲ್ಲರಿಗೂ ಸಮಾನ ಶಿಕ್ಷಣ ಸಿಗಲಿ ಎಂಬ ಕಾರಣದಿಮದ ಎನ್‌ಇಪಿ ಜಾರಿ ಮಾಡಲಾಗಿದೆ. ಆದರೆ, ನಾಗ್‌ಪುರ್ ಶಿಕ್ಷಣ ನೀತಿ ಎನ್ನುವ ಹಾಗೂ ಲಾಭದಾಯಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಪರಮೇಶ್ವರ್ ಸೇರಿ ಇತರೆ ಸಚಿವರು, ಶಾಸಕರ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿರುವ ಎನ್‌ಇಪಿ ಮತ್ತು ಸಿಬಿಎಸ್‌ಇ ಪಠ್ಯಕ್ರಮವನ್ನು ಕೈಬಿಟ್ಟು ರಾಜ್ಯಪಠ್ಯಕ್ರಮ ಅಳವಡಿಸಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ಗಾಂಧಿ ಕುಟುಂಬ ಜಪ ಬಿಡಿ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗಾಂಧಿ ಕುಟುಂಬವನ್ನು ಜಪ ಮಾಡುವುದಕ್ಕೆ ಅಲ್ಪ ವಿರಾಮ ನೀಡಿ, ತಾವು ಬೆಳೆದು ಬಂದಂತಹ ಸಮಾಜವಾದಿ ಸಿದ್ಧಾಂತಗಳನ್ನು ನೆನೆಸಿಕೊಳ್ಳಿ ಸಿದ್ದರಾಮಣ್ಣ. ಲೋಹಿಯಾ, ಜೆಪಿ ಚಳವಳಿ, ಪ್ರೊ. ನಂಜುಂಡಸ್ವಾಮಿ ಅವರನ್ನು ನೆನಪಿಸಿಕೊಳ್ಳಿ. ಚುನಾವಣೆಗಾಗಿ ಶಿಕ್ಷಣವನ್ನು ರಾಜಕೀಯ ಮಾಡಬೇಡಿ. ಮುಂದಿನ ದಿನಗಳಲ್ಲಿ ನಿಮಗೆ ಮಾರಕವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್, ಎನ್. ಮಹೇಶ್, ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ. ತಿಮ್ಮೇಗೌಡ, ಪ್ರೊ. ಕೆ.ಆರ್. ವೇಣುಗೋಪಾಲ್, ಪ್ರೊ. ಕರಿಸಿದ್ಧಪ್ಪ, ಪ್ರೊ. ಮೀನಾ ಚಂದಾವರ್ಕರ್ ಮತ್ತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಎರಡು ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಒಪ್ಪಿಕೊಂಡವರು 3ನೇ ನೀತಿಯನ್ನು ಒಪ್ಪಿಕೊಳ್ಳಲು ಹೇರಿಕೆ ಎನ್ನುತ್ತಿದ್ದಾರೆ. ಎನ್‌ಇಪಿ ಜಾರಿಗೊಳಿಸಲು 2015ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ಅಧಿಕೃತವಾಗಿ ಕಳುಹಿಸಿಕೊಟ್ಟಿತ್ತು. ಇಂದು ಅದೇ ನೀತಿಯನ್ನು ರದ್ದುಗೊಳಿಸಲು ಹೊರಟಿದೆ.- ಅರುಣ್ ಶಹಾಪುರ, ಮಾಜಿ ಎಂಎಲ್‌ಸಿ ವರ್ಗ ರಹಿತ, ಗ್ರಾಮೀಣ, ಲಿಂಗ ತಾರತಮ್ಯವಲ್ಲದ, ಭೌಗೋಳಿಕ ಅಸಮಾನತೆಯನ್ನು ತೊಲಗಿಸಿ ಎಲ್ಲ ಸಮಾಜಕ್ಕೂ ಸಮಾನ ಶಿಕ್ಷಣ ನೀಡಬೇಕೆಂಬುದು ಎನ್‌ಇಪಿ ಗುರಿಯಾಗಿದೆ. ವಯಸ್ಸಿಗೆ ಅನುಗುಣವಾಗಿ ಕಲಿಸುವ ಅಂಶಗಳು ಎನ್‌ಇಪಿಯಲ್ಲಿವೆ.- ಅನುರಾಗ್ ಬೆಹರ್, ಸಿಇಒ, ಅಜೀಂ ಪ್ರೇಮ್ ಜೀ ಪ್ರತಿಷ್ಠಾನ