ಸಿನಿಮಾ ಹಾಡುಗಳಲ್ಲ, ಶ್ಲೋಕ - ಭಜನೆಗಳ ಅಂತ್ಯಾಕ್ಷರಿ ಆಟ ಇದು...!

1357473
Published on

ಬೆಂಗಳೂರು: ನಾವೆಲ್ಲಾ ಆಧುನಿಕ ಜಗತ್ತಿಗೆ ತೆರೆದುಕೊಂಡಿದ್ದೇವೆ. ಆಟಗಳೆಂದರೆ ಮೊಬೈಲ್ ಗೇಮ್, ವಿಡಿಯೋ ಗೇಮ್ ಮಾತ್ರ ಎಂಬಂತಾಗಿದೆ. ಆದರೆ ದಶಕಗಳ ಹಿಂದೆ ಹೀಗಿರಲಿಲ್ಲ. ಸಾಂಪ್ರದಾಯಿಕ ಆಟಗಳನ್ನೇ ಮಕ್ಕಳು ಆಡುತ್ತಿದ್ದರು. ಎಲ್ಲಾ ಮಕ್ಕಳು ಒಟ್ಟು ಸೇರಿದ್ದಾರೆ ಎಂದಾದರೆ ಅಲ್ಲಿ ಅಂತ್ಯಾಕ್ಷರಿ ಆಟ ಸಾಮಾನ್ಯವಾಗಿತ್ತು. ಮೊಬೈಲ್ ಗೇಮಿನ ದಾಸರಾಗುತ್ತಿರುವ ಇಂದಿನ ಬಹುತೇಕ ಮಕ್ಕಳಿಗೆ ಅಂತ್ಯಾಕ್ಷರಿ ಆಟ ಎಂದರೇನೇ ಗೊತ್ತಿಲ್ಲ.!

ಆದರೆ ಗೋಕರ್ಣದಲ್ಲಿರುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳು ಅಂತ್ಯಾಕ್ಷರಿ ಆಟವಾಡಿದ್ದಾರೆ. ಇದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ಈಗಾಗಲೇ 40 ಸಾವಿರ ಜನರು ವೀಕ್ಷಿಸಿದ್ದಾರೆ.

ನಾಲ್ಕೈದು ಜನ ಒಟ್ಟಾಗಿ ಅಂತ್ಯಾಕ್ಷರಿ ಆಟವಾಡುತ್ತಾರೆ. ಯಾರಾದರೊಬ್ಬರು ಹಾಡನ್ನು ಪ್ರಾರಂಭಿಸಬೇಕು. ಹಾಡುವುದು ನಿಲ್ಲಿಸಿದಾಗ ಯಾವ ಅಕ್ಷರದಿಂದ ಹಾಡು ಕೊನೆಯಾಗುತ್ತದೋ, ಮುಂದಿನ ವ್ಯಕ್ತಿ ಕೊನೆಯಾದ ಪದದಿಂದ ಮತ್ತೊಂದು ಹಾಡು ಹಾಡಬೇಕು. ಒಂದು ಬಾರಿ ಹಾಡಿದ ಹಾಡನ್ನು ಮತ್ತೊಮ್ಮೆ ಹಾಡುವಂತಿಲ್ಲ. ಅಂತ್ಯಾಕ್ಷರಿ ಆಟ ಹೀಗೆ ಸಾಗುತ್ತದೆ.

ಬಹುತೇಕ ಸಂದರ್ಭದಲ್ಲಿ ಸಿನಿಮಾ ಹಾಡುಗಳನ್ನು ಹಾಡುತ್ತಾ ಅಂತ್ಯಾಕ್ಷರಿ ಹಾಡಲಾಗುತ್ತದೆ. ಆದರೆ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಮಕ್ಕಳು ಆಡಿದ ಅಂತ್ಯಾಕ್ಷರಿ ಆಟ ಮೆಚ್ಚುಗೆ ಗಳಿಸುವುದಕ್ಕೆ ಕಾರಣವೊಂದಿದೆ. ಅವರು ಹಾಡಿರುವುದು ಸಿನಿಮಾ ಹಾಡಲ್ಲ, ಬದಲಾಗಿ ಸಂಸ್ಕೃತದ ಶ್ಲೋಕ ಮತ್ತು ಭಜನೆಗಳ ಕಠಿಣ ಅಂತ್ಯಾಕ್ಷರಿ ಆಟ. ಗುರುಕುಲದಲ್ಲಿ ಕಲಿಯುವ ವಿದ್ಯೆಯ ವಿಶೇಷತೆ ಎಂದರೆ ಇದುವೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net