119 ಬಾರಿ ಫೋನ್ ಮಾಡಿದ್ದ ಸೋನಂ

6-6853015ac2773
Published on

ನವದೆಹಲಿ: ಹನಿಮೂನ್ ವೇಳೆ ಪತಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸೋನಂ ರಘುವಂಶಿ ಮದುವೆಗೂ ಮುನ್ನ ಮತ್ತು ಆ ಬಳಿಕ ಒಬ್ಬ ವ್ಯಕ್ತಿಯೊಂದಿಗೆ 119 ಬಾರಿ ಫೋನ್ ಮಾಡಿ ಮಾತನಾಡಿರುವ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೋನಂ ಫೋನ್ ನಂಬರ್​ನ ಕರೆ ವಿವರಗಳನ್ನು ಕಲೆ ಹಾಕಿದಾಗ ಮಾರ್ಚ್ 1ರಿಂದ ಮಾರ್ಚ್ 25 ರವರೆಗೆ ಸಂಜಯ್ ವರ್ವ ಎಂಬ ವ್ಯಕ್ತಿಯೊಂದಿಗೆ ನೂರಕ್ಕೂ ಹೆಚ್ಚು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಕಂಡು ಬಂದಿದೆ. ಆದರೆ ಪ್ರಸ್ತುತ ಸಂಜಯ್ ಫೋನ್ ನಂಬರ್ ಸ್ವಿಚ್ ಆಪ್ ಆಗಿದ್ದು, ಈ ವ್ಯಕ್ತಿ ಯಾರು, ಸೋನಂಗೂ ಈತನಿಗೂ ಏನು ಸಂಬಂಧ, ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಈತನ ಪಾತ್ರ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

3 ಫೋನ್ ಬಳಕೆ: ಸೋನಂ ತನ್ನ ಪತಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಬಳಿಕ ಅತನ ಫೋನ್ ಒಡೆದು ಪ್ರಪಾತಕ್ಕೆ ಎಸೆದಿದ್ದಳು. ಆ ಬಳಿಕ ಆಕೆ ತನ್ನ ಬಳಿ ಇದ್ದ 3 ಫೋನ್​ಗಳನ್ನು ಸ್ವಿಚ್ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿ ಇಂದೋರ್​ಗೆ ಬಂದಿದ್ದಳು. ಇಂದೋರ್​ನಲ್ಲಿ ಆಕೆ ತನ್ನ ಒಂದು ಫೋನ್ ಆನ್ ಮಾಡಿ ವಾಟ್ಸ್​ಆಪ್ ಮೆಸೇಜ್​ಗಳನ್ನು ಪರಿಶೀಲಿಸಿದ್ದಳು. ಸೋನಂ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರಿಗೆ ಅದರ ಮಾಹಿತಿ ಲಭ್ಯವಾಗಿ, ಸೋನಂಳ ಹುಡುಕಾಟ ತೀವ್ರಗೊಳಿಸಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಆದರೆ ಇದುವರೆಗೆ ಆಕೆಯ ಫೋನ್​ಗಳು ಪತ್ತೆಯಾಗಿಲ್ಲ, ಪೊಲೀಸರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ಸ್ಥಳಗಳಲ್ಲಿ ಫೋನ್​ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net