ನಾನು ಉಗ್ರನೋ, ದೆಹಲಿಯ ಮಗನೋ ಎನ್ನುವುದನ್ನು ಜನರೇ ತೀರ್ಮಾನಿಸಲಿ: ಕೇಜ್ರಿವಾಲ್​ ಭಾವನಾತ್ಮಕ ಪತ್ರಿಕಾಗೋಷ್ಠಿ

Kejrival
Published on

ನವದೆಹಲಿ: ಬಿಜೆಪಿಯ ಸ್ಟಾರ್​ ಪ್ರಚಾರಕ ಮತ್ತು ಲೋಕಸಭಾ ಸಂಸದ ಪರ್ವೇಶ್​ ವರ್ಮಾ ದೆಹಲಿಯ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರನ್ನು ಉಗ್ರನೆಂದು ಕರೆದಿರುವ ವೀಡಿಯೋ ವೈರಲ್​ ಆಗಿದೆ. ಇದೇ ವಿಚಾರವಾಗಿ ಕೇಜ್ರಿವಾಲ್​ ಭಾವನಾತ್ಮಕ ಸುದ್ದಿಗೋಷ್ಠಿಯನ್ನು ನಡೆಸಿದ್ದು, ನಾನು ದೆಹಲಿಯ ಜನರ ಮಗನೋ ಅಥವಾ ಉಗ್ರನೋ ಎನ್ನುವುದನ್ನು ಜನರೇ ತೀರ್ಮಾನಿಸಲಿ ಎಂದು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್​, "ನಾನು ರಾಜ್ಯಕ್ಕಾಗಿ ಎಷ್ಟೊಂದು ಕೆಲಸ ಮಾಡಿದ್ದೇನೆ. ನನ್ನ ಕುಟುಂಬಕ್ಕಾಗಿ ಮತ್ತು ನನಗಾಗಿ ದುಡಿಯದೆ ಕೇವಲ ಜನರಿಗಾಗಿ ದುಡಿದಿದ್ದೇನೆ. ಅಂತಹದರಲ್ಲಿ ನಾನು ಒಬ್ಬ ಉಗ್ರನಾಗಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.

ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಅವರು, "ನಾನು ಒಬ್ಬ ಶುಗರ್​ ಪೇಷೆಂಟ್​. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್​ ತೆಗೆದುಕೊಳ್ಳುತ್ತೇನೆ. ಡಾಕ್ಟರ್​ ನನಗೆ ರಾಜಕೀಯದಲ್ಲಿ ಇರಬಾರದು, ಇದ್ದರೆ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಹಾಗಿದ್ದರೂ ನಾನು ಜನರಿಗಾಗಿ ದುಡಿಯುತ್ತಿದ್ದೇನೆ" ಎಂದು ತಿಳಿಸಿದರು.

ಐಐಟಿ ಖರ್ಗಾಪುರದಲ್ಲಿ ಪದವಿ ಪಡೆದಿರುವ ಕೇಜ್ರಿವಾಲ್​, "ನಾನು ಮನಸ್ಸು ಮಾಡಿದ್ದರೆ ಹೊರದೇಶಕ್ಕೆ ಹೋಗಿ ಬದುಕಬಹುದಿತ್ತು. ನನ್ನ ಅನೇಕ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈಗಾಗಲೇ ಹೊರದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ನಾನು ನನ್ನ ಕೆಲಸವನ್ನೂ ಬಿಟ್ಟು ಜನರಿಗಾಗಿ ರಾಜಕೀಯಕ್ಕೆ ಬಂದೆ. ಹೀಗಿದ್ದಾಗ ನಾನು ಹೇಗೆ ಉಗ್ರನಾಗಲು ಸಾಧ್ಯ?" ಎಂದು ಪ್ರಶ್ನಿಸಿದರು. ನಾನು ಉಗ್ರನೋ ಅಥವಾ ದೆಹಲಿಯ ಮಗನೋ ಎನ್ನುವುದನ್ನು ಜನರೇ ತಮ್ಮ ಮತಗಳ ಮೂಲಕ ನಿರ್ಧರಿಸಲಿ ಎಂದು ಅವರು ಹೇಳಿದರು.

ವರ್ಮಾ ಅವರ ಮಾತಿಗೆ ಮನನೊಂದಿರುವ ಕೇಜ್ರಿವಾಲ್​, ವರ್ಮಾ ಅವರ ಮೇಲೆ ಎಫ್​​ಐಆರ್​ ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿಯ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿರುವ ವರ್ಮಾ, ಕಳೆದ ವಾರ ಮಡಿಪುರದಲ್ಲಿ ಕೈಲಾಶ್​ ಸಂತ್ಲಾ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ, "ನಾವು ಇದುವರೆಗೂ ದೆಹಲಿಯಲ್ಲಿ ಎಷ್ಟೋ ಜನ ಹಿಂದು ಹೆಣ್ಣು ಮಕ್ಕಳನ್ನು ಮುಸ್ಲಿಂ ಯುವಕರು ಎತ್ತಿಕೊಂಡು ಹೋಗಿರುವ ಘಟನೆಯನ್ನು ನೋಡಿದ್ದೇವೆ. ಅಂತಹ ಯಾವುದೇ ಪ್ರಕರಣದ ಮೇಲೆ ಯಾವುದೇ ರೀತಿಯ ಕ್ರಮವನ್ನು ದೆಹಲಿಯಲ್ಲಿ ಅಡಗಿ ಕುಳಿತಿರುವ ಕೇಜ್ರಿವಾಲ್​ರಂತ ಉಗ್ರರಿಂದ ತೆಗೆದುಕೊಳ್ಳಲಾಗಿಲ್ಲ. ನಾವು ಪಾಕಿಸ್ತಾನದ ಉಗ್ರರೊಂದಿಗೆ ಹೋರಾಡಬೇಕೋ ಅಥವಾ ಇಲ್ಲಿರುವ ಕೇಜ್ರಿವಾಲ್​ರಂತಹ ಉಗ್ರರೊಂದಿಗೆ ಹೋರಾಡಬೇಕೋ" ಎಂದು ಸಭಿಕರಲ್ಲಿ ಪ್ರಶ್ನೇ ಕೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net