

ಬೆಂಗಳೂರು: ನಿರ್ದೇಶಕ ಶ್ರೀಕಾಂತ್ ಹುಣಸೂರು ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಸನ್ ಆಫ್ ಮುತ್ತಣ್ಣ’. ತಂದೆ-ಮಗನ ಬಾಂಧವ್ಯದ ಬಗೆಗಿನ ಈ ಸಿನಿಮಾದಲ್ಲಿ ಪ್ರಣಮ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ವೈರಂ’ ಹಾಗೂ ‘ಕುಮಾರಿ 21 ಎಫ್’ ಬಳಿಕ ಇದೀಗ ಪ್ರಣಮ್ ಮುತ್ತಣ್ಣನ ಮಗನಾಗಿ ತೆರೆಗೆ ಬರಲು ಸಿದ್ಧರಾಗಿದ್ದಾರೆ. ‘ಸನ್ ಆಫ್ ಮುತ್ತಣ್ಣ’ದಲ್ಲಿ ‘ದಿಯಾ’, ‘ಕೇಸ್ ಆಫ್ ಕೊಂಡಾಣ’ ಖ್ಯಾತಿಯ ಖುಷಿ ರವಿ ಪ್ರಣಮ್‌ಗೆ ಜೋಡಿಯಾಗಿದ್ದಾರೆ. ಇತ್ತೀಚೆಗೆಷ್ಟೆ ಚಿತ್ರೀಕರಣ ಪೂರ್ಣಗೊಳಿಸಿದ ಚಿತ್ರತಂಡ, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ.
ಪಾತ್ರದ ಕುರಿತು ಪ್ರಣಮ್, ‘ನನ್ನದು ಶಿವು ಎಂಬ ನಿವೃತ್ತ ಯೋಧನ ಮಗನ ಪಾತ್ರ. ತಂದೆ-ಮಗನ ಬಾಂಧವ್ಯದ ಬಗೆಗಿನ ಕಥೆಯಿದು. ಈ ಪಾತ್ರ ನನಗೆ ತುಂಬಾ ಆಪ್ತವಾಗಿದೆ. ಸನ್ ಆಫ್ ದೇವರಾಜ್ ಆದ ನಾನು ಇಲ್ಲಿ ಮುತ್ತಣ್ಣ ಮಗನಾಗುವ ಮೂಲಕ ಹೊಸ ಜವಾಬ್ದಾರಿ ನಿರ್ವಹಿಸಿದ್ದೇನೆ. ಸೂಕ್ಷ್ಮ ಹಾಗೂ ಭಾವನಾತ್ಮಕ ಕಥೆಯು ಬೆಂಗಳೂರಿನಿಂದ ಸಾಗಿ ವಾರಾಣಸಿಯಲ್ಲಿ ತೆರೆದುಕೊಳ್ಳುತ್ತದೆ. ಅದೇ ಸಿನಿಮಾದ ವಿಶೇಷತೆ. ಈ ಚಿತ್ರದಲ್ಲಿ ನಾಲ್ಕು ಸಾಂಗ್‌ಗಳಿದ್ದು, ಹಲವು ದಿನಗಳ ಕಾಲ ಡಾನ್ಸ್ ಪ್ರಾಕ್ಟೀಸ್ ಮಾಡಿದ್ದೇವೆ. ಪಾತ್ರ ಸರಳವಾದರೂ, ನೀಡುವ ಸಂದೇಶ ದೊಡ್ಡದು’ ಎಂದು ಮಾಹಿತಿ ನೀಡುತ್ತಾರೆ.
ನಿರ್ದೇಶಕ ಶ್ರೀಕಾಂತ್ ಹುಣಸೂರು, ‘49 ದಿನಗಳ ಕಾಲ ಬೆಂಗಳೂರು, ವಾರಾಣಸಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಇಂದಿನ ಸಮಾಜಕ್ಕೆ ಹತ್ತಿರವಾಗುವ ಕಥೆಯನ್ನು ಸಿನಿಮಾ ಮೂಲಕ ನಿರೂಪಿಸಲಾಗಿದೆ’ ಎನ್ನುತ್ತಾರೆ. ನಾಯಕಿ ಖುಷಿ ರವಿ, ‘ನಿರ್ದೇಶಕರಿಗೆ ಚಿತ್ರದ ಕಥೆಯ ಬಗ್ಗೆ ಸ್ಪಷ್ಟತೆಯಿದೆ. ತಂದೆ-ಮಗನ ಸಂಬಂಧವನ್ನು ಪ್ರೇಕ್ಷಕರಿಗೆ ಆಪ್ತವಾಗುವಂತೆ ನಿರೂಪಿಸಿದ್ದಾರೆ’ ಎನ್ನುತ್ತಾರೆ. ಚಿತ್ರದಲ್ಲಿ ಪ್ರಣಮ್-ಖುಷಿ ಜತೆ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ದತ್ತಣ್ಣ, ಗಿರೀಶ್ ಶಿವಣ್ಣ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ, ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರಿ ಸಂಕಲನವಿರಲಿದೆ.