ವೃದ್ಧ ತಾಯಿಯನ್ನು ಅರಣ್ಯದಲ್ಲಿ ಬಿಟ್ಟುಬರಲು ಹೊರಟ ಮಗ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹಾಲು ತಂದರೆ ಅನ್ನವಿಲ್ಲವೆನ್ನುವ ಪರಿಸ್ಥಿತಿ ಆಗಾಗ ನಿರ್ಮಾಣವಾಗುತ್ತಿತ್ತು. ಇದನ್ನು ಗಮನಿಸಿದ ರೈತನ ಮಡದಿ ತನ್ನ ಗಂಡನಿಗೆ ಸಲಹೆಯೊಂದನ್ನು ನೀಡುತ್ತಾಳೆ, ‘ನಿಮ್ಮ ಮುದಿ ತಾಯಿ ಬರೀ ಊಟದ ಯೋಚನೆಯನ್ನು ಮಾಡುತ್ತಾ ಕೂತಿರುತ್ತದೆ. ಆಕೆಯಿಂದ ಕವಡೆ ಕಾಸಿನ ಪ್ರಯೋಜನವಿಲ್ಲ. ಇವಳೊಬ್ಬಳು ಇಲ್ಲದಿದ್ದರೆ, ನಮ್ಮ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ನೀಡಬಹುದಿತ್ತು’ ಎಂದು. ಉತ್ತರವಾಗಿ ಗಂಡ ಹೇಳುತ್ತಾನೆ ‘ಅದಕ್ಕೆ ನಾನೇನು ಮಾಡಲಿ? ಆಕೆಗೆ ಸಾವು ಬರ್ತಿಲ್ಲ. ಸಾಯುವವರೆಗೆ ನಾವು ಆಕೆಯನ್ನು ಸಾಕಲೇಬೇಕಲ್ಲ!’ ಇವನ ಮಾತಿಗೆ ಪ್ರತಿಯಾಗಿ, ಮಡದಿ ಉಪಾಯವೊಂದನ್ನು ಸೂಚಿಸುತ್ತಾಳೆ - ‘ನೋಡು, ನಿನ್ನ ಈ ಮುದಿತಾಯಿ ಒಂದಲ್ಲ ಒಂದು ದಿನ ಸಾಯುವವಳೇ. ಅವಳಿದ್ದೂ ಪ್ರಯೋಜನವಿಲ್ಲ. ಆದುದರಿಂದ ಆಕೆಯನ್ನು, ತೀರ್ಥಯಾತ್ರೆಯ ನೆಪದಲ್ಲಿ ಎಲ್ಲಾದರೂ ದೂರ ಕರಕೊಂಡು ಹೋಗಿ ಕಾಡಲ್ಲಿ ಬಿಟ್ಟು ಬಾ.
ಇದ್ದವರಾದರೂ ನಾವು ಇದ್ದುದನ್ನು ತಿಂದ್ಕೊಂಡು ನೆಮ್ಮದಿಯಿಂದ ಇರಬಹುದು. ಅವಳಿಗೆ ಕೊಡುವ ಆಹಾರದ ಪಾಲಾದರೂ ನಮ್ಮ ಪಾಲಿಗೆ ಆಗುತ್ತದೆಯಲ್ಲ?’ ಇವರಿಬ್ಬರ ಮಾತುಕತೆಯನ್ನು ಅಜ್ಜಿ ಕೇಳಿಸಿಕೊಂಡರೂ ಕೇಳದವಳಂತೆ ಇರುತ್ತಾಳೆ. ಹೆಂಡತಿಯ ಯೋಚನೆ ಸರಿಯಾದುದೇ ಎಂದು ಮನಗಂಡ, ರೈತ ಒಂದು ದಿನ ತನ್ನ ತಾಯಿಯ ಬಳಿ ಬಂದು ‘ದೂರದ ಊರಲ್ಲಿ ಬೌದ್ಧ ಸ್ತೂಪವೊಂದಿದೆ. ಅಲ್ಲಿಗೆ ನಿನ್ನನ್ನು ಕರಕೊಂಡು ಹೋಗಬೇಕೆಂದಿದ್ದೇನೆ. ನಾಳೆ ಬೆಳಗ್ಗೆ ಹೊರಡಲು ತಯಾರಾಗು’ ಎನ್ನುತ್ತಾನೆ. ಅಜ್ಜಿ ಮರು ಮಾತನಾಡದೆ ಒಪ್ಪುತ್ತಾಳೆ. ಅಂತೆಯೇ ಮರುದಿನ ಬೆಳಗ್ಗೆ ತಾಯಿಯನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ, ಆ ಬುಟ್ಟಿಯನ್ನು ತನ್ನ ತಲೆಯ ಮೇಲೆ ಹೊತ್ಕೊಂಡು ಕಾಡಿನತ್ತ ಪಯಣ ಬೆಳೆಸಲು ಉದ್ಯುಕ್ತನಾಗುತ್ತಾನೆ.
ಹೊರಡುವ ಮುನ್ನ, ಅಜ್ಜಿ, ಸೊಸೆ ಮತ್ತು ಮೊಮ್ಮಕ್ಕಳನ್ನು ಕರೆದು, ಮುತ್ತಿಕ್ಕಿ ಅವರಿಗೆ ಮನಸಾರೆ ಆಶೀರ್ವಾದ ಮಾಡಲು ಮರೆಯಲಿಲ್ಲ. ಕಾಡಿನಲ್ಲಿ ಸಾಗುವಾಗ ಆ ಅಜ್ಜಿ ತನ್ನ ತಲೆಗೆ ತಾಗುತ್ತಿದ್ದ ಗಿಡ ಮರಗಳ ಎಲೆಗಳನ್ನು ಕಿತ್ತು ದಾರಿ ಉದ್ದಕ್ಕೂ ಎಸೆಯುತ್ತಿದ್ದಳು. ಹೀಗೆ ಬೆಟ್ಟ ಹತ್ತಿ ಬೆಟ್ಟ ಇಳಿದು ಕಾಡುಪ್ರಾಣಿಗಳು ತುಂಬಿದ್ದ ದುರ್ಗಮ ಕಾಡೊಂದು ಬಂದಂತೆ, ಅಜ್ಜಿ ಮಗನಿಗೆ ಹೇಳುತ್ತಾಳೆ ‘ಮಗನೇ, ನನ್ನನ್ನು ಇಲ್ಲಿಯೇ ಇಳಿಸು. ಹೇಗಿದ್ದರೂ, ಈ ದೇಹ ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗೋದೇ. ಅದರ ಬದಲಿಗೆ, ಹಸಿದಿರುವ ಇಲ್ಲಿಯ ಕಾಡು ಪ್ರಾಣಿಗಳಿಗಾದರೂ ಈ ನನ್ನ ದೇಹ ಒಂದು ಹೊತ್ತಿನ ಆಹಾರವಾದರೆ, ನನ್ನ ಜೀವನ ಸಾರ್ಥಕವಾದಂತೆ. ಸ್ತೂಪದ ದರುಶನ ಮಾಡಿ ಫಲಿಸುವುದಾದರೂ ಏನು? ಸಂಜೆಯಾಗಿದೆ.
ನೀನು ಮಾತ್ರ ಬಂದ ದಾರಿಯಲ್ಲೇ ತಪ್ಪದೇ ಬೇಗನೆ ಹೋಗು. ನಿನ್ನ ಮಡದಿ ಮಕ್ಕಳು ನಿನ್ನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಹಾ ಹಿಂತಿರುಗುವಾಗ ನಿನಗೆ ದಾರಿ ತಪ್ಪಬಾರದೆಂದು ನಾನು ಇಲ್ಲಿಗೆ ಬರುವಾಗ ದಾರಿ ಉದ್ದಕ್ಕೂ ಗಿಡಮರಗಳ ಹಸಿರೆಲೆಗಳನ್ನು ಎಸೆಯುತ್ತಾ ಬಂದಿದ್ದೇನೆ. ಅವನ್ನು ತುಳಿಯುತ್ತಾ ಅದೇ ದಾರಿಯಲ್ಲಿ ಮನೆ ಸೇರಿಕೋ ಕಂದಾ. ಈ ಮುದಿ ದೇಹ ಜೀವಂತವಾಗಿದ್ದರೆಷ್ಟು, ಇರದಿದ್ದರೆಷ್ಟು! ಮುಂದೆ ಒಂದು ದಿನ ನೀನೂ ಒಬ್ಬ ಶ್ರೀಮಂತನಾಗಿ ಜೀವನ ನಡೆಸುವಂತಾಗಲಿ. ಎಲ್ಲರೂ ಚೆನ್ನಾಗಿರಿ’ ಎಂದು ಹೇಳುತ್ತಾ ಅವನ ತಲೆ ಸವರಿ ಆಶೀರ್ವದಿಸಿದಳು.

ತಾಯಿಯ ಮಾತುಗಳನ್ನು ಕೇಳಿದ ಮಗ, ಆಕೆಯ ಪಾದಗಳಿಗೆರಗಿ, ಗೋಳೋ ಎಂದು ಅಳಲು ಶುರುಮಾಡಿದ. ನಿನ್ನನ್ನು ತೀರ್ಥಯಾತ್ರೆ ಮಾಡಿಸುವೆ ಎಂಬ ಸುಳ್ಳು ಹೇಳಿ ಕಾಡಲ್ಲಿ ಬಿಟ್ಟು ಬರಲು ಹೊರಟಿರುವ ನನ್ನ ದುರಾಲೋಚನೆ ಗೊತ್ತಿದ್ದೂ ನೀನು ಮರುಮಾತನಾಡದೆ ಹೊರಟೆ, ಮಾತ್ರವೇ ಅಲ್ಲ, ನಾನು ದಾರಿ ತಪ್ಪಬಾರದೆಂಬ ದೃಷ್ಟಿಯಿಂದ ದಾರಿಯುದ್ದಕ್ಕೂ ಎಲೆಗಳನ್ನು ಕಿತ್ತುಹಾಕಿ ನನ್ನನ್ನು ರಕ್ಷಿಸಿದೆ.

ನಿನ್ನಂತವಹಳನ್ನು ಬಿಟ್ಟು ನಾನು ಹೇಗೆ ಬದುಕಿರಲಿ ಅಮ್ಮ? ನಾನು ನಿನಗೆ ಮಾಡಿದ್ದನ್ನೇ ನನ್ನ ಮಕ್ಕಳು ನನಗೇ ಮಾಡಲಾರರು ಎಂಬ ನಂಬಿಕೆ ಎಲ್ಲಿದೆ? ನನ್ನನ್ನು ಕ್ಷಮಿಸಿ ಬಿಡು ತಾಯಿ. ಬಾ ನಾವಿನ್ನು ಮನೆಗೆ ಹೋಗೋಣ. ಇದ್ದುದನ್ನು ಹಂಚಿ ತಿನ್ನೋಣ’ ಎನ್ನುತ್ತಾ ಮತ್ತೆ ತನ್ನ ಅಮ್ಮನನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ಆ ಬುಟ್ಟಿಯನ್ನು ಹೊತ್ತುಕೊಂಡು ಮನೆಯತ್ತ ಹೊರಟ. ಇದು ಮಾತೃಹೃದಯ. ಅದಕ್ಕೇ ಬಲ್ಲವರು ಹೇಳಿದ್ದು ‘ಈ ಜಗತ್ತಿನಲ್ಲಿ ಮಕ್ಕಳಿಗೆ ಅತ್ಯಂತ ಸುರಕ್ಷಿತವಾದ ಸ್ಥಳಗಳೆಂದರೆ ಅಮ್ಮನ ಮಡಿಲು ಮತ್ತು ಅಪ್ಪನ ಹೆಗಲು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net