ರುಚಿ ರುಚಿಯಾದ ಅಡುಗೆ ಉಣಬಡಿಸಲಿಲ್ಲ; ತಾಯಿಯನ್ನೇ ಹತ್ಯೆಗೈದ ಪಾಪಿ ಮಗ!

Untitled design (73)
Published on

ಥಾಣೆ: ತಾನು ಬಯಸಿದಂತೆ ರುಚಿಕರವಾದ ಆಹಾರವನ್ನು ಮಾಡಿಕೊಡದ ತಾಯಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಪುತ್ರ, ಆಕೆಯನ್ನು ಕುಡುಗೋಲಿನಿಂದ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ.

ಮುರ್ಬಾದ್ ತಾಲೂಕಿನ ವೇಲು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ರುಚಿಯಾದ ಅಡುಗೆ ಮಾಡಿ ಬಡಿಸಲಿಲ್ಲ ಎಂದು ತಾಯಿಯೊಂದಿಗೆ ಜಗಳ ಮಾಡಿದ ಪುತ್ರ, ಜಟಾಪಟಿ ತೀವ್ರವಾದ ಬೆನ್ನಲ್ಲೇ ಕುಡುಗೋಲಿನಿಂದ ಹಲ್ಲೆಗೈದಿದ್ದಾನೆ. ಕೂಡಲೇ ನೆಲಕ್ಕೆ ಕುಸಿದ ಮಹಿಳೆ ಮೃತಪಟ್ಟಿದ್ದಾರೆ ಎಂದು ಥಾಣೆ ಗ್ರಾಮಾಂತರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಮನೆಯ ವಿಚಾರವಾಗಿ ಆಗಾಗ್ಗೆ ಮಹಿಳೆ ಮತ್ತು ಆಕೆಯ ಮಗನ ನಡುವೆ ಜಗಳ ನಡೆಯುತ್ತಿತ್ತು. ಅದೇ ರೀತಿ ಭಾನುವಾರವೂ ಕೂಡ ಜಟಾಪಟಿ ಸಂಭವಿಸಿದೆ. ರುಚಿಕರವಾದ ಆಹಾರವನ್ನು ಮಾಡಿ ಕೊಡಲಿಲ್ಲ ಎಂದು ಕೆಂಡಾಮಂಡಲಗೊಂಡ ಮಗ, ಕೋಪದ ಭರದಲ್ಲಿ ತಾಯಿಯ ಕುತ್ತಿಗೆಯ ಮೇಲೆ ಕುಡುಗೋಲಿನಿಂದ ಹಲ್ಲೆಗೈದಿದ್ದಾನೆ. ಕೂಡಲೇ ನಿಂತಲ್ಲೇ ಕುಸಿದ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ ನೆರೆಹೊರೆಯವರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇಷ್ಟೆಲ್ಲಾ ನಡೆದ ಕೂಡಲೇ ಆರೋಪಿ ಅಧಿಕ ಪ್ರಮಾಣದಲ್ಲಿ ನಿದ್ರಾ ಮಾತ್ರೆಗಳನ್ನು ಸೇವಿಸಿ, ಅಸ್ವಸ್ಥಗೊಂಡಿದ್ದಾನೆ. ಆತನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯದ ಮಟ್ಟಿಗೆ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net