

ಬಾಗಲಕೋಟೆ: ಅಳಿಯನನ್ನು ಮಾವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವಂತಹ ಆಘಾತಕಾರಿ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ನಡೆದಿದೆ. ಅಳಿಯ ಭುಜಬಲ ಕರ್ಜಗಿ(34)ಯನ್ನು ಮಾವ ತಮ್ಮನಗೌಡ ಮರ್ಯಾದೆ ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿರುವ ಆರೋಪಿ ತಮ್ಮನಗೌಡ ಪುತ್ರಿ ಭಾಗ್ಯಶ್ರೀ ಇತ್ತೀಚೆಗೆ ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇದು ತಮ್ಮನಗೌಡನ ಆಕ್ರೋಶಕ್ಕೆ ಕಾರಣವಾಗಿತ್ತು. ಅಳಿಯ ಭುಜಬಲ ಕರ್ಜಗಿ ತನ್ನ ಮಗಳ ಬದುಕನ್ನೇ ಹಾಳು ಮಾಡಿದ್ದಾನೆ ಎಂದು ಹೇಳುತ್ತಾ, ದ್ವೇಷ ಸಾಧಿಸುತ್ತಾ ಬಂದಿದ್ದ. ಇದೀಗ ಅಳಿಯ ಅಳಿಯ ಭುಜಬಲ ಕರ್ಜಗಿಯ ಕಣ್ಣಿಗೆ ಕಾರದ ಪುಡಿ ಎರಚಿ, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಒಂದೇ ಗ್ರಾಮದ ಕ್ಷತ್ರೀಯ ಜಾತಿಯ ಭಾಗ್ಯಶ್ರೀ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಭುಜಬಲ ಕರ್ಜಗಿ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ವಿವಾಹ ಮಾಡಿಕೊಂಡಿದ್ದರು. ನಂತರ ಟಕ್ಕೋಡ ಗ್ರಾಮದಲ್ಲೇ ಬಂದು ನೆಲೆಸಿದ್ದರು. ಮಗಳು ಮನೆ ಬಿಟ್ಟು ಹೋಗಿ ಮದುವೆಯಾದ್ದರಿಂದ ತಮ್ಮನಗೌಡ ಸೇಡು ಇಟ್ಟುಕೊಂಡಿದ್ದ. ಹೀಗಾಗಿ ನಿನ್ನೆ (ಡಿ.17) ರಾತ್ರಿ 8.30ರ ಸುಮಾರಿಗೆ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆ ಆರೋಪಿ ತಮ್ಮನಗೌಡನ ಕೃತ್ಯಕ್ಕೆ ಇನ್ನಿಬ್ಬರು ಸಾಥ್ ನೀಡಿದ್ದಾರೆ. ಘಟನೆ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.