

ಕಾಸರಗೋಡು: ಮೊಬೈಲ್ ಚಟ ತ್ಯಜಿಸು, ಈ ರೀತಿ ಇರುವುದು ಬೇಡ ಎಂದು ಬುದ್ದಿ ಮಾತು ಹೇಳಿದ ತಾಯಿಯನ್ನು ಪುತ್ರನೊಬ್ಬ ಅಮಾನುಷವಾಗಿ ಥಳಿಸಿ, ಹತ್ಯೆಗೈದ ವಿಲಕ್ಷಣ ಘಟನೆಯೊಂದು ಕೇರಳದ ಕಾಸರಗೋಡಿನಲ್ಲಿ ವರದಿಯಾಗಿದೆ.
63 ವರ್ಷದ ಮಹಿಳೆಯೊಬ್ಬರು ಮೊಬೈಲ್ ಫೋನ್ ಚಟಕ್ಕೆ ಏಕೆ ದಾಸನಾಗಿರುವೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಪುತ್ರ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಒಂದು ವಾರಗಳ ನಂತರ ಮಹಿಳೆ ಕಣ್ಣೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಜಿಲ್ಲೆಯ ಕಣಿಚಿರ ರುಗ್ಮಿಣಿ ಎಂದು ಗುರುತಿಸಲಾಗಿದ್ದು, ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊಬೈಲ್ ಗೀಳು ಯಾಕೆ ಎಂದು ಪ್ರಶ್ನಿಸಿದ್ದನೇ ಕಾರಣ ಮಾಡಿಕೊಂಡ ಪುತ್ರ ಸುಜಿತ್, ಮನೆಯ ಗೋಡೆಗೆ ತನ್ನ ತಾಯಿಯ ತಲೆ ಬಡಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.
ಅಪರಾಧ ವರದಿಯಾದ ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಸುಜಿತ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಮೊಬೈಲ್ ಫೋನ್ ಅನ್ನು ನಿರಂತರವಾಗಿ ಬಳಸುವುದನ್ನು ಪ್ರಶ್ನಿಸಿದ್ದರಿಂದ ತನ್ನ ತಾಯಿಯ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಕೋಝಿಕ್ಕೋಡ್‌ನ ಕುತಿರವಟ್ಟಂನಲ್ಲಿರುವ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ,(ಏಜೆನ್ಸೀಸ್).