ಯಾರೋ ಬಂದು ಬಾಂಬ್ ಹಾಕ್ತಾರೆ, ಮತ್ಯಾರೋ ಬಂದು ಪಾಕ್ ಪರ ಜಿಂದಾಬಾದ್ ಅಂತಾರೆ; ಶೋಭಾ ಕರಂದ್ಲಾಜೆ ಆಕ್ರೋಶ

Shobha Karandlaje
Published on

ಬೆಂಗಳೂರು: ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿರುದ್ಧ ಹಿಂದು ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಘಟನೆ ನಡೆದ ನಗರ್ತಪೇಟೆಯಲ್ಲಿ ರಸ್ತೆ ಮಧ್ಯೆ ಮಂಗಳವಾರ ಧರಣಿ ಹೂಡಿ ಹನುಮಾನ್ ಚಾಲೀಸಾ ಪಠಿಸಿದರೆ, ಜೈಶ್ರೀರಾಮ್ ಘೋಷಣೆ ಮೊಳಗಿಸಿದರು. ಈ ಪ್ರತಿಭಟನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದರು.

ರಸ್ತೆ ಇಕ್ಕೆಲಗಳಲ್ಲಿ ಅಂಗಡಿ ಮುಂಗಟ್ಟೆಗಳು ಸ್ವಯಂಪ್ರೇರಿತ ಬಂದ್, ನೂರಾರು ಕಾರ್ಯಕರ್ತರು ಜಮಾವಣೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿದರು. ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಶೋಭಾ ಕರಂದ್ಲಾಜೆ ಮತ್ತಿತರ ಮುಖಂಡರನ್ನು ವಶಕ್ಕೆ ಪಡೆದರು. ಈ ವೇಳೆ ನೂಕು ನುಗ್ಗಲು, ಪ್ರತಿರೋಧದಿಂದಾಗಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು.

ಎಲ್ಲಿದೆ ಕಾನೂನು ಸುವ್ಯವಸ್ಥೆ ?

ಪೊಲೀಸರ ವಶದಲ್ಲಿದ್ದ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರೊಹಾಯ್ದರು. ನ್ಯಾಯಕ್ಕಾಗಿ ಹೋರಾಡುವವರನ್ನು ವಶಕ್ಕೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ದುಷ್ಜರ್ಮಿಗಳ ವಿರುದ್ಧ ಕ್ರಮವಿಲ್ಲ‌. ಕಾನೂನು- ಸುವ್ಯವಸ್ಥೆ ಎಲ್ಲಿದೆ ? ಸರ್ಕಾರ ಹಿಡಿತ ಕಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದರು.

ಯಾರೋ ವಿಧಾನಸೌಧಕ್ಕೆ ಬಂದು ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗುತ್ತಾರೆ. ಮತ್ತಿನ್ಯಾರೋ ಬಂದು ಬಾಂಬ್ ಹಾಕುತ್ತಾರೆ‌. ಇನ್ಯಾರೋ ಬಂದು ಯುವತಿಯರ ಮೇಲೆ ಆ್ಯಸಿಡ್ ಎರಚುತ್ತಾರೆ‌. ಸಿದ್ದರಾಮಯ್ಯ ಸರ್ಕಾರದ ಅತಿಯಾದ ಓಲೈಕೆಯ ದುಷ್ಪರಿಣಾಮವಿದು. ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net