ಜಿಲ್ಲಾಧಿಕಾರಿಗಳಿಗೆ ಮತ್ತಷ್ಟು ಬಲ: ಹೊರೆ ಕಡಿಮೆ ಮಾಡಲು ಹೆಚ್ಚುವರಿ ಎಡಿಸಿಗಳ ನೇಮಕ; ಜವಾಬ್ದಾರಿಗಳ ವಿಕೇಂದ್ರೀಕರಣ

Front 2 Vidhana Soudha
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ತಳಮಟ್ಟದಲ್ಲಿ ಆಡಳಿತ ಸುಧಾರಣೆ ಮಾಡುವ ಮೂಲಕ ನೌಕರರ ಉತ್ಪಾದಕತೆ ಹೆಚ್ಚಿಸಿ ಸರ್ಕಾರದ ಯೋಜನೆಗಳ ಫಲ ಸಕಾಲದಲ್ಲಿ ಜನರಿಗೆ ತಲುಪಿಸುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಬಲ ತುಂಬುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಆಡಳಿತಕ್ಕೆ ಜಡತ್ವ ಆವರಿಸಿದೆ, ಕೆಳಹಂತದಲ್ಲಿ ನೌಕರರ ಮೇಲೆ ಯಾರ ಹಿಡಿತವೂ ಇಲ್ಲದೇ ಇರುವುದು ಭ್ರಷ್ಟಾಚಾರಕ್ಕೆ ಎಡೆಮಾಡುತ್ತಿದೆ ಎಂಬ ಆರೋಪಗಳಿವೆ. ಆದ್ದರಿಂದಲೇ ಸರ್ಕಾರ ಈಗ ಅನೇಕ ಸುಧಾರಣಾ ಕ್ರಮಗಳಿಗೆ ಮುಂದಾಗಿದೆ. ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದು, ಸದ್ಯದಲ್ಲಿಯೇ ಮತ್ತೊಂದು ಸಭೆ ನಡೆಸಲಿದ್ದು, ಅದಕ್ಕೆ ಪೂರಕವಾಗಿ ಆಡಳಿತ ಸುಧಾರಣಾ ಸಮಿತಿಯಿಂದಲೂ ಮಾಹಿತಿ ಕೋರಿದೆ. ಸಮಿತಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಈಗ ಕಾರ್ಯದ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲಿರುವ ಒತ್ತಡ ಕಡಿಮೆ ಮಾಡಿದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಡಿಸಿಗಳಿಗೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಅದರಲ್ಲೂ ಕೋವಿಡ್ ನಂತರವಂತೂ ಬೇರೆ ಕೆಲಸ ಗಮನಿಸುವುದಕ್ಕೂ ಆಗದ ಪರಿಸ್ಥಿತಿ ಇದೆ. ಇದರಿಂದಾಗಿ ಕಡತ ವಿಲೇವಾರಿ ಒಂದೆಡೆ ಪ್ರಗತಿ ಕಾಣುತ್ತಿಲ್ಲ, ಇನ್ನೊಂದೆಡೆ ಡಿಸಿಗಳ ನ್ಯಾಯಾಲಯದಲ್ಲಿನ ಪ್ರಕರಣ ವಿಲೇವಾರಿ ತಡವಾಗುತ್ತದೆ. ಇದರಿಂದ ಸಾರ್ವಜನಿಕರ ಅಲೆದಾಟ ಹೆಚ್ಚಾಗಿದೆ.

ಏನು ಬದಲಾವಣೆ: ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳೇ ಹೆಚ್ಚಾಗಿವೆ. ಅದನ್ನು ಈಗ ವಿಶೇಷ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ಹಂಚಿಕೆ ಮಾಡಿ. ಅಭಿವೃದ್ಧಿ ಕಾರ್ಯಗಳ ಮೇಲುಸ್ತುವಾರಿ ಮಾಡುವುದು ಹಾಗೂ ನಿರ್ವಹಣೆ ಮಾಡುವುದು. ಯೋಜನೆಗಳ ಫಲ ತಳಹಂತಕ್ಕೆ ಸಿಗುವಂತೆ ನೋಡಿಕೊಳ್ಳುವುದು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ನೀಡಲಾಗುತ್ತದೆ.

ಮತ್ತೊಬ್ಬ ಎಡಿಸಿ: ಈಗ ಒಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿ ಇದ್ದಾರೆ. ಅವರೊಂದಿಗೆ ಮತ್ತೊಬ್ಬ ಎಡಿಸಿಯನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಡಿಸಿಗಳಲ್ಲಿ ಒಬ್ಬರು ಆಡಳಿತ ನೋಡಿಕೊಂಡರೆ ಮತ್ತೊಬ್ಬರು ನ್ಯಾಯಾಲಯದ ಪ್ರಕರಣಗಳ ಜತೆಗೆ ಜಿಲ್ಲಾಧಿಕಾರಿಗಳ ಕರ್ತವ್ಯದ ಜತೆಗೆ ಮತ್ತಷ್ಟು ಜವಾಬ್ದಾರಿಗಳನ್ನು ಹೊರುವ ರೀತಿಯಲ್ಲಿ ವ್ಯವಸ್ಥೆ ತರುವುದು ಸರ್ಕಾರದ ಉದ್ದೇಶವೆಂದು ಮೂಲಗಳು ತಿಳಿಸಿವೆ.

ಎಡಿಸಿಗೆ ನ್ಯಾಯಾಲಯದ ಹೊಣೆ: ಈ ಸದ್ಯಕ್ಕೆ ಇರುವ ಎಡಿಸಿಗೆ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸೂಚನೆ ನೀಡುವ ಬಗ್ಗೆ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧಾರವಾಗಿದೆ. ಕಂದಾಯ ಇಲಾಖೆಯಿಂದ ಆದೇಶ ಹೊರಬರಬೇಕಾಗಿದೆ.

ಡಿಸಿಗಳಿಗೆ ಹೊಣೆ ಕಡಿಮೆ ಮಾಡಿ ಕಂದಾಯ ಇಲಾಖೆಯ ಕೆಲಸಗಳನ್ನು ಹೆಚ್ಚು ಮಾಡಿಸುವ ಬಗ್ಗೆ ರ್ಚಚಿಸಲಾಗಿದೆ. ಸದ್ಯದಲ್ಲಿಯೇ ಇನ್ನೊಂದು ಸಭೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. | ಆರ್. ಅಶೋಕ್ ಅಧ್ಯಕ್ಷ, ಆಡಳಿತ ಸುಧಾರಣೆ ಸಂಪುಟ ಉಪ ಸಮಿತಿ

ಹೇಗಿದ್ದ ವ್ಯವಸ್ಥೆ ಹೇಗಾಗಿದೆ?: ಜಿಲ್ಲಾಧಿಕಾರಿಗಳಿಗೆ ಈ ಹಿಂದೆ ಅವರಿಗೆ ಇದ್ದ ಅನೇಕ ಅಧಿಕಾರಗಳು ಈಗ ಇಲ್ಲದಂತಾಗಿವೆ. ಹಿಂದೆ ಜಿಲ್ಲೆಯಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಇದ್ದವು. ಡಿಸಿ ಕಚೇರಿಯಲ್ಲಿ ಕೇಂದ್ರ ಸ್ಥಾನಿಕ ಸಹಾಯಕರು ಹೇಗೆ ಕಂದಾಯ ವಿಚಾರಗಳನ್ನು ಗಮನಿಸುತ್ತಾರೋ, ಅದೇ ರೀತಿ ಅಭಿವೃದ್ಧಿ ಯೋಜನೆಗಳನ್ನು ವಿಶೇಷ ಜಿಲ್ಲಾಧಿಕಾರಿ ಗಮನಿಸುತ್ತಿದ್ದರು. ಅವರ ಕೈ ಕೆಳಗೆ ಜಿಲ್ಲಾ ಅಭಿವೃದ್ಧಿ ಸಹಾಯಕರಿದ್ದರು. ಆದರೆ ಕ್ರಮೇಣ ಮಂಡಳಿಯೂ ರದ್ದಾಗಿದೆ. ಅನೇಕ ಹುದ್ದೆಗಳು ರದ್ದಾಗಿವೆ. ಈಗ ಪ್ರತಿಯೊಂದು ಇಲಾಖೆಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗೆ ಯಾವುದೇ ನಿಯಂತ್ರಣವೂ ಇಲ್ಲ. ಯಾವ ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದು ಡಿಸಿ ಒಬ್ಬರೇ ಗಮನಿಸಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಜಿಲ್ಲಾಧಿಕಾರಿ ಜವಾಬ್ದಾರಿಗಳೇನೇನು?

  • ಕಾನೂನು-ಸುವ್ಯವಸ್ಥೆಯತ್ತ ಗಮನ
  • ಚುನಾವಣೆಗಳನ್ನು ನಡೆಸುವುದು, ಮತದಾರರ ಪಟ್ಟಿ ಸಿದ್ಧ ಮಾಡುವುದು
  • ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರ್ವಹಣೆ
  • ಭೂ ಕಂದಾಯ, ಭೂ ದಾಖಲೆಗಳ ನಿರ್ವಹಣೆ, ತೆರಿಗೆ ಸಂಗ್ರಹ, ತಾಲೂಕು ಕಚೇರಿಗಳ ಮೇಲೆ ನಿಗಾ
  • ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪಿಂಚಣಿ, ಮುಜುರಾಯಿ ಸೇರಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಜವಾಬ್ದಾರಿ
  • ಆಹಾರ ಧಾನ್ಯಗಳ ವಿತರಣೆ ಮೇಲೆ ನಿಗಾ
  • ಅಬಕಾರಿ ವಿಚಾರಗಳು
  • ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಜವಾಬ್ದಾರಿ
  • ಸ್ಥಳೀಯ ಸಂಸ್ಥೆಗಳ ಮೇಲೆ ನಿಗಾ
  • ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ
  • ಸಾರ್ವಜನಿಕ ಅಹವಾಲು ಸ್ವೀಕಾರ
  • ಜಾತಿಗಣತಿ
  • ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊಣೆ
  • ಖಜಾನೆ ಇಲಾಖೆ ಜವಾಬ್ದಾರಿ
  • ಬಡತನ ನಿಮೂಲನೆ, ಬಾಲ ಕಾರ್ವಿುಕ ಪದ್ಧತಿ ನಿಮೂಲನೆ ಕಾರ್ಯಕ್ರಮಗಳು ಜಾರಿ
  • ಪಲ್ಸ್ ಪೋಲಿಯೊ
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಹೊಣೆ
  • ಕೋವಿಡ್ ನಿರ್ವಹಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net