ಸಮನ್ವಯದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ

HUN-OCT-12-1(TP MEETING}
ಹುಣಸೂರು ನಗರದ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇಒ ಬಿ.ಕೆ.ಮನು ಮಾತನಾಡಿದರು. ಎಇಇ ಮಹಮದ್ ಖಲೀಂ, ಸಿದ್ದಪ್ಪ, ವಿಜಯರತ್ನ ಇದ್ದರು.
Published on

ಹುಣಸೂರು: ತಾಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸ್ಥಾವರಗಳು ಮತ್ತು ಬೀದಿದೀಪಗಳ ಬಾಕಿ ಇದೆ ಎನ್ನಲಾದ ವಿದ್ಯುತ್ ಬಿಲ್‌ಗಳ ಪಾವತಿ ಕುರಿತು ಅ.27ರೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳು ಸೆಸ್ಕ್ ಜತೆಗೆ ಸಭೆ ನಡೆಸಿ ಲೆಕ್ಕ ಸಮನ್ವಯಗೊಳಿಸಿಕೊಂಡು ಪರಿಹರಿಸಿಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪಿಡಿಒಗಳು ಮತ್ತು ಸೆಸ್ಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅ.4ರಂದು ಆಯೋಜನೆಗೊಂಡಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡುವ ವೇಳೆ ಸೆಸ್ಕ್ ಹುಣಸೂರು ವಿಭಾಗಕ್ಕೆ ಗ್ರಾ.ಪಂ.ಗಳಿಂದ ಒಟ್ಟು 21 ಕೋಟಿ ರೂ. ಮತ್ತು ಬಿಳಿಕೆರೆ ವಿಭಾಗ ವ್ಯಾಪ್ತಿಯ ಗ್ರಾ.ಪಂ.ಗಳಿಂದ 10 ಕೋಟಿ ರೂ. ಸೇರಿ ಒಟ್ಟು 31 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಿದೆ ಎಂದು ತಿಳಿಸಿದ್ದರು. ಈ ಕುರಿತು ಪಿಡಿಒಗಳ ಜತೆ ಮಾತನಾಡಿದಾಗ ಸೆಸ್ಕ್ ಕುರಿತಾಗಿ ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಮತ್ತು ಸೆಸ್ಕ್ ಅಧಿಕಾರಿಗಳ ಸಭೆ ಆಯೋಜಿಸಿದ್ದೇನೆ. ರಾಜ್ಯದ ಎಲ್ಲ ಗ್ರಾ.ಪಂ.ಗಳ ಕುಡಿಯುವ ನೀರಿನ ಸ್ಥಾವರಗಳು ಮತ್ತು ಬೀದಿದೀಪಗಳು ಬಾಕಿ ಇರುವ ಬಿಲ್‌ಗಳಿಗೆ ಸಂಬಂಧಿಸಿದಂತೆ 2015ರಲ್ಲಿ ಅಂದಿನ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ 2014ರ ಏ.1ಕ್ಕಿಂತ ಹಿಂದಿನ ಯಾವುದೇ ಬಿಲ್‌ಗಳನ್ನು ಗ್ರಾ.ಪಂ.ಗಳು ಪಾವತಿ ಮಾಡುವಂತಿಲ್ಲ. 2014ರ ನಂತರದ ಬಿಲ್‌ಗಳನ್ನು ಮಾತ್ರ ಪಾವತಿ ಮಾಡಬೇಕೆಂದು ನಿರ್ಣಯಿಸಿದೆ ಎಂದು ಮಾಹಿತಿ ನೀಡಿದರು.

ಗೊಂದಲದ ಗೂಡಾಗಿದೆ: ಆದರೆ ಸ್ಥಳೀಯವಾಗಿ ಈ ಆದೇಶದ ಕುರಿತು ಇಂದಿಗೂ ಗೊಂದಲಗಳು ಮುಂದುವರಿದ ಕಾರಣ ಗ್ರಾ.ಪಂ.ಗಳು ಬಿಲ್ ಬಾಕಿಯನ್ನು ಕಂಡು ದಂಗಾಗಿವೆ. ಸೆಸ್ಕ್ ಅಧಿಕಾರಿಗಳೂ ಕೂಡ ಈ ಕುರಿತು ಗಮನಿಸದ ಕಾರಣ ಗೊಂದಲಗಳು ಮುಂದುವರಿದಿವೆ. ಇಂದಿನ ಸಭೆಯಲ್ಲಿ ಬಿಲ್ ಕುರಿತಾದ ಗೊಂದಲ ನಿವಾರಣೆಗೆ ರೀಕಾನ್ಸಿಲೇಷನ್‌ಗಾಗಿ ಸಭೆ ನಡೆಸಬೇಕು. ಅ.27ರೊಳಗೆ ಎಲ್ಲ ಗ್ರಾ.ಪಂ.ಗಳಲ್ಲೂ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿರಿ. ಇದರಿಂದ ನಿಮಗೆ ಅರ್ಧದಷ್ಟು ಆರ್ಥಿಕ ಹೊರೆ ಕಡಿಮೆಯಾಗಲಿದೆ. ಬೀದಿದೀಪಗಳು ಮತ್ತು ಕುಡಿಯುವ ನೀರಿನ ಸ್ಥಾವರಗಳ ಕುರಿತಾಗಿ ಪ್ರತ್ಯೇಕ ಲೆಡ್ಜರ್ ನಿರ್ವಹಣೆ ಮಾಡಿರಿ. ಕುಡಿಯುವ ನೀರಿನ ಸ್ಥಾವರದ ಸ್ಥಾಪನೆಗೆ ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವನ್ನೇ ಸಂಪರ್ಕಿಸಿ ಮುಂದುವರಿಯುವುದು ಸೂಕ್ತ ಎಂದರು.

ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ನಿಗಮದ ನಿರ್ದೇಶನದಂತೆ ಬಿಲ್‌ಗಳನ್ನು ನೀಡುತ್ತಿದ್ದೇವೆ. ಇದೀಗ ಪ್ರತಿ ತಿಂಗಳು ಬಿಲ್ ನೀಡಲಾಗುತ್ತಿದೆ. ರೀಕಾನ್ಸಿಲೇಷನ್‌ಗೆ ನಾವು ಸಿದ್ಧರಿದ್ದೇವೆ. ಸರ್ಕಾರದ ಆದೇಶಗಳನ್ವಯ ಇಬ್ಬರೂ ಜಂಟಿ ಬಾಧ್ಯಸ್ತರಾಗಿ ಕಾರ್ಯ ಸಭೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳೋಣ ಎಂದರು.

ಸಭೆಯಲ್ಲಿ ಬಿಳಿಕೆರೆ ವಿಭಾಗದ ಸೆಸ್ಕ್ ಎಇಇ ವಿಜಯರತ್ನ, ತಾ.ಪಂ.ಯೋಜನಾ ಅಧಿಕಾರಿ ರಾಜೇಶ್, ಎಇ ಶ್ರೀಧರ್ ಸೇರಿದಂತೆ ಪಿಡಿಒಗಳು ಮತ್ತು ಸೆಸ್ಕ್ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net