ಪ್ರಾಯೋಗಿಕ ಸಮಸ್ಯೆ ಬಗೆಹರಿಸಿ: ಗ್ರಾಮಗಳಲ್ಲಿ ಸೋಂಕು ಸರಪಳಿ ತುಂಡರಿಸಬೇಕು

Editorial
Published on

ನಗರಪ್ರದೇಶಗಳಿಗೆ ಹೆಚ್ಚು ಬಾಧಿಸಿದ್ದ ಕರೊನಾ ಸೋಂಕು ಈಗ ಹಳ್ಳಿಗಳಲ್ಲೂ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗರಗಳಲ್ಲಿ ಸ್ಥಿತಿ ನಿರ್ವಹಿಸುವುದಕ್ಕೂ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಸಂಭಾಳಿಸುವುದಕ್ಕೂ ತುಂಬ ವ್ಯತ್ಯಾಸವಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಈ ಸವಾಲನ್ನು ಗಂಭೀರವಾಗಿಯೇ ಪರಿಗಣಿಸಿವೆ. ಈ ಸಂಬಂಧ ಎರಡು ಮಹತ್ವದ ಬೆವಣಿಗೆಗಳು ನಡೆದಿವೆ. ಗ್ರಾಮೀಣ ಭಾಗದಲ್ಲಿ ಸೋಂಕಿನ ಸರಪಳಿ ಮುರಿಯಲು, ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಭಾನುವಾರ ಕೇಂದ್ರ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆ ಮಾಡುವುದು, ಎಲ್ಲ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್​ಗಳ ಲಭ್ಯತೆ, ಆಕ್ಸಿಮೀಟರ್, ಇತರ ಔಷಧಗಳ ಪೂರೈಕೆ, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳ ಆರಂಭ ಸೇರಿದಂತೆ ಹಲವು ಕ್ರಮಗಳನ್ನು ಆರೋಗ್ಯ ಸಚಿವಾಲಯ ಈ ಮಾರ್ಗಸೂಚಿಯಲ್ಲಿ ತಿಳಿಸಿದ್ದು, ಪ್ರಸಕ್ತ ಸ್ಥಿತಿ ಎದುರಿಸುವಲ್ಲಿ ಪೂರಕವಾಗಿವೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಸೋಂಕಿತರಿಗೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು, ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ.

ನಮ್ಮಲ್ಲಿ ಬಹುತೇಕ ಗ್ರಾಮಗಳು ಸೂಕ್ತ ಆರೋಗ್ಯ ವ್ಯವಸ್ಥೆಯಿಂದ ವಂಚಿತವಾಗಿವೆ ಎಂಬುದು ಕಹಿವಾಸ್ತವ. ಈಗಿನ ಸನ್ನಿವೇಶದಲ್ಲಿ ಅಗತ್ಯ ಸೌಲಭ್ಯಗಳನ್ನು ತುರ್ತಾಗಿ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಬೇಕಾಗಿದೆ. ಹಳ್ಳಿಗಳಲ್ಲಿನ ಸಮಸ್ಯೆಗಳು ಕೂಡ ಭಿನ್ನವೇ. ಅಲ್ಲಿ ಈಗಲೂ ಸಾಮಾನ್ಯ ಜ್ವರವೆಂದೇ ಭಾವಿಸಿ, ಜನರು ಕರೊನಾ ಪರೀಕ್ಷೆ, ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಮೇಲೆ ಸಮೀಪದ ನಗರಗಳ ಆಸ್ಪತ್ರೆಗಳಿಗೆ ದೌಡಾಯಿಸುತ್ತಾರೆ. ಆದರೆ, ಅದೆಷ್ಟೋ ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರೂ ಹತ್ತಿರದಲ್ಲಿ ಯಾವುದೇ ಟೆಸ್ಟಿಂಗ್ ಕೇಂದ್ರಗಳು ಇಲ್ಲ. ಹೋಬಳಿ ಅಥವಾ ತಾಲೂಕು ಕೇಂದ್ರಕ್ಕೆ ಹೋಗಬೇಕು ಎಂದರೆ ಪ್ರಸಕ್ತ ಲಾಕ್​ಡೌನ್ ಇರುವುದರಿಂದ ವಾಹನ ವ್ಯವಸ್ಥೆ ಇಲ್ಲ. ಸ್ವಂತ ವಾಹನದಲ್ಲೂ ಓಡಾಡದಂಥ ಸ್ಥಿತಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆಯಾದರೂ, ಅದಕ್ಕೆ ಬೇಕಾದ ಕನಿಷ್ಠ ಸೌಲಭ್ಯಗಳೂ ಅಲ್ಲಿಲ್ಲ. ಸೋಂಕಿನ ತೀವ್ರ ಲಕ್ಷಣ ಇರುವವರಿಗೆ ವೈದ್ಯಕೀಯ ಆಮ್ಲಜನಕ, ರೆಮ್​ಸಿವಿರ್ ಪೂರೈಸುವ ಸವಾಲೂ ಇದೆ. ಹಳ್ಳಿಯ ಜನರಿಗೆ ಅವರಿಗೆ ಹತ್ತಿರವಾದ ಸ್ಥಳದಲ್ಲೇ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರಗಳು, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಒಳಗೊಂಡ ತಂಡ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಬೇಕು ಮತ್ತು ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದು. ಮಾಹಿತಿ ಒದಗಿಸುವ, ಅರಿವು ತುಂಬುವ ಕೆಲಸವೂ ಅಭಿಯಾನದ ರೂಪದಲ್ಲಿ ನಡೆಯಬೇಕಿದೆ. ಆಗಲೇ ಗ್ರಾಮಗಳಲ್ಲಿ ಸೋಂಕಿನ ಸರಪಳಿ ಮುರಿಯಲು ಸಾಧ್ಯವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net