

ಶಿಕಾರಿಪುರ: ಇ- ಸ್ವತ್ತಿನ ಸಮಸ್ಯೆ ತೀವ್ರವಾಗುತ್ತಿದೆ. ಜನರಿಗೆ ಯಾವುದೇ ರೀತಿಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಿ. ಪುರಸಭೆ ಅಧಿಕಾರಿಗಳು ಹಲವು ವರ್ಷಗಳಿಂದ ಬಾಕಿ ಇರುವ ಸಮಸ್ಯೆಗೆ ಸರ್ಕಾರ ನೀಡಿರುವ ಮಾರ್ಗದರ್ಶಿ ಅನ್ವಯ ಎ ಮತ್ತು ಬಿ ಖಾತೆಗಳನ್ನು ಸಕಾಲದಲ್ಲಿ ನೀಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭಾ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಇ-ಸ್ವತ್ತಿನ ಸಮಸ್ಯೆ ಪ್ರತಿ ವಾರ್ಡ್‌ನಲ್ಲಿಯೂ ಇದೆ. ಇದು ಸದಸ್ಯರಿಗೆ ಕಿರಿಕಿರಿಯಾಗುತ್ತಿದೆ ಎಂದರು.
ಜನರಿಗೆ ಕೂಡಲೇ ಇ-ಸ್ವತ್ತನ್ನು ತಲುಪಿಸುವ ಕಾರ್ಯ ಸಮರೋಪಾದಿಯಲ್ಲಿ ಆಗಬೇಕು. ಏಕೆಂದರೆ ಮೇ 10 ಕೊನೆಯ ದಿನಾಂಕ. ಅಲ್ಲಿಯವರೆಗೂ ಕಾಯದೆ ಏಪ್ರಿಲ್ ಅಂತ್ಯದೊಳಗೆ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಪ್ರತಿಯೊಬ್ಬ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಬೇಕು. ಪುರಸಭಾ ವಾಹನಗಳಲ್ಲಿರುವ ಮೈಕ್‌ಗಳನ್ನು ಉಪಯೋಗಿಸಿಕೊಂಡು ಈ ಬಗ್ಗೆ ಪ್ರಚಾರಪಡಿಸಿ. ಜನತೆ ನಿಮ್ಮನ್ನು ನಂಬಿದ್ದಾರೆ. ಜನತೆಯ ನಿರೀಕ್ಷೆ ನಿಜ ಮಾಡುವ ಕಾಲ ಸನಿಹವಾಗಿದೆ ಎಂದು ತಿಳಿಸಿದರು.
ಜನತೆ ಇ-ಸ್ವತ್ತಿನ ಸಮಸ್ಯೆಯಿಂದ ರೋಸಿಹೋಗಿದ್ದಾರೆ. ದಶಕಗಳಿಂದ ಇರುವ ಸಮಸ್ಯೆಗೆ ಒಂದು ಮಾರ್ಗ ದೊರೆತಿದೆ. ಜನರನ್ನು ಕಚೇರಿಗೆ ಅಲೆದಾಡಿಸದೆ, 2004ರಿಂದ ಇತ್ತೀಚೆಗೆ ಇಸಿ ಪಡೆದು, ಅನಗತ್ಯ ದಾಖಲೆಗಳನ್ನು ಕೇಳದೆ ಪುರಸಭೆಯಲ್ಲಿ 8-10 ಕೌಂಟರ್ ತೆರೆದು, ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಡೇಟಾ ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಶೀಘ್ರ ಸಮಸ್ಯೆ ಪರಿಹರಿಸಿ ಎಂದರು.
ಭೂ ಪರಿವರ್ತನೆಯಾಗಿ, ಪುರಸಭಾ ಮುಖ್ಯಾಧಿಕಾರಿ ಅನುಮೋದಿಸಿದ ನಕ್ಷೆ ಹೊಂದಿ, ಅಭಿವೃದ್ಧಿ ಶುಲ್ಕ ಪಾವತಿಸಿ, ಖಾತೆ ದಾಖಲು ಮಾಡಿರುವ ನಿವೇಶನಗಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಇ-ಸ್ವತ್ತು ದಾಖಲೆ ನೀಡಲಾಗಿದೆ. ಅಂತಹ ಪ್ರಕರಣಗಳಿಗೆ ಈಗ ಎ ಖಾತಾ ನೀಡಬೇಕೆಂದು ಪುರಸಭಾ ಸದಸ್ಯರಾದ ರೇಣುಕಸ್ವಾಮಿ ಮತ್ತು ಪ್ರಶಾಂತ್ ಜೀನಳ್ಳಿ ಮನವಿ ಮಾಡಿದರು. ಈ ಕುರಿತು ಉತ್ತರಿಸಿದ ಮುಖ್ಯಾಧಿಕಾರಿ ಭರತ್, ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಸಲಹೆ ಪಡೆಯುವುದಾಗಿ ತಿಳಿಸಿದರು.
ದಿಶಾ ಸಮಿತಿ ಸದಸ್ಯ ಕೆ.ಎಸ್.ಗುರುಮೂರ್ತಿ, ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಜಿಪಂ ಮಾಜಿ ಸದಸ್ಯ ಕೆ.ಹಾಲಪ್ಪ, ತಾಪಂ ಮಾಜಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಉಪ ನೋಂದಣಾಧಿಕಾರಿ ದಿವ್ಯಾ ಇತರರಿದ್ದರು.