

ಬಹುತೇಕ ಎಲ್ಲ ಸೇವೆಗಳಿಗೂ ಜನರಿಂದ ತೆರಿಗೆ ಪಡೆಯುವ ಸರ್ಕಾರ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ಮಾತ್ರ ಎಡವಿಬಿಡುತ್ತದೆ. ಹೊಸ ಹೊಸ ಯೋಜನೆಗಳು, ಘೋಷಣೆಗಳು, ಕಾರ್ಯಕ್ರಮಗಳು ಜನರ ವಿಶ್ವಾಸ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಇದೇ ಕಾರಣ. ಇತ್ತೀಚಿನ ವರ್ಷಗಳಲ್ಲಂತೂ ಎಲ್ಲ ಇಲಾಖೆಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಆಗಿದೆ.
ಕಡತ ಕಾಯ್ದಿರಿಸುವಿಕೆ, ಜನರಿಗೆ ಸೌಲಭ್ಯ ಒದಗಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಯಬೇಕು ಎಂಬುದು ಇದರ ಹಿಂದಿನ ಆಶಯ. ಆದರೆ, ವಾಸ್ತವದಲ್ಲಿ ಅಂಥ ಸ್ಥಿತಿ ಹಲವು ಇಲಾಖೆಗಳಲ್ಲಿ ಇಲ್ಲವೇ ಇಲ್ಲ. ಯಾವುದೋ ನೆಪ ಹೇಳಿ ಜನರು ಕಚೇರಿಗಳಿಗೆ ಎಡತಾಕುವಂತೆ ಮಾಡುವುದು, ಲಂಚ ನೀಡಿದರೆ ಅಥವಾ ಪ್ರಭಾವ ಬಳಸಿ ಒತ್ತಡ ತಂದರೆ ಮಾತ್ರ ಕೆಲಸ ಮಾಡಿಕೊಡುವುದು ಸೇರಿದಂತೆ ಹಲವು ಧೋರಣೆಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲುಗಾಡಿಸಿ ಬಿಡುತ್ತವೆ. ಭ್ರಷ್ಟಾಚಾರದ ವಿರುದ್ಧ ವೇದಿಕೆಗಳಿಂದ ದೊಡ್ಡ ದನಿಯಲ್ಲಿ ಘೋಷಣೆಗಳು ಮೊಳಗುತ್ತಿದ್ದರೂ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರದ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ದುಡ್ಡು ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಶ್ರೀಸಾಮಾನ್ಯನ ಅರ್ಜಿಯನ್ನು ಕಸದಬುಟ್ಟಿಗೆ ಎಸೆಯುವಂಥ ನಿದರ್ಶನಗಳಿಗೆ ಕೊರತೆ ಇಲ್ಲ.
ಕಂದಾಯ ವಿಭಾಗದ ಇಂಥದ್ದೊಂದು ಲೋಪದ ಬಗ್ಗೆ ‘ವಿಜಯವಾಣಿ’ ವಿಸ್ತೃತವಾಗಿ ವಿಶೇಷ ವರದಿ ಪ್ರಕಟಿಸಿ ಆಡಳಿತವನ್ನು ಎಚ್ಚರಿಸಿತ್ತು. ಭೂಮಿಯ ಹಕ್ಕನ್ನು ಖಾತರಿಪಡಿಸಲು ಅತ್ಯಗತ್ಯವಾದ 11ಇ ನಕ್ಷೆ ಪಡೆಯುವುದಕ್ಕೆ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮತ್ತು ಅದರಿಂದ ಆಸ್ತಿ ಮಾಲೀಕರು ಅನುಭವಿಸುತ್ತಿರುವ ಸಂಕಷ್ಟ ಹೇಳತೀರದು. 11ಇ ನಕ್ಷೆ ಕೋರಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿರುವ ಅರ್ಜಿಗಳು ಧೂಳು ಹಿಡಿಯುತ್ತಿರುವ ಪರಿಣಾಮ ಆಸ್ತಿ ಮಾರಾಟದ ಜತೆಗೆ ವಿಭಾಗ ಪತ್ರಗಳು, ದಾನ ಕ್ರಯ, ಗುತ್ತಿಗೆ ನೀಡುವುದು ಇತ್ಯಾದಿ ಯಾವುದೇ ವ್ಯವಹಾರ ಸಾಧ್ಯವಾಗದೆ ಜನರು ಪರಿತಪಿಸುವಂತಾಗಿದೆ. ಹಣಬಲವಿರುವವರು ಮತ್ತು ಪ್ರಭಾವಶಾಲಿಗಳು ಅಧಿಕಾರಿಗಳಿಗೆ ಲಂಚ ಕೊಟ್ಟು ಅಥವಾ ಒತ್ತಡ ತಂದು ಭೂ ನಕ್ಷೆ ಪಡೆದು ಆಸ್ತಿ ಮಾಲೀಕತ್ವ ಭದ್ರಮಾಡಿಕೊಳ್ಳುತ್ತಿದ್ದಾರೆ. ಆದರೆ, ಜನಸಾಮಾನ್ಯರ ಪಾಡೇನು? ವರದಿ ಪ್ರಕಟಗೊಂಡ ಬಳಿಕ ಇಲಾಖೆ ಎಚ್ಚೆತ್ತುಕೊಂಡಿದೆ. ಮೋಜಿಣಿ ತಂತ್ರಾಂಶದ ಮೂಲಕ ಅರ್ಹತೆಗೆ ಅನುಗುಣವಾಗಿ 11ಇ ನಕ್ಷೆ ನೀಡಲು ಪರಿಗಣಿಸುವ ಜತೆಗೆ, ಹೊಸ ಪಹಣಿ ಸಹ ರಚಿಸುವುದಾಗಿ ಹಿರಿಯ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಆದರೆ, ಕಂದಾಯ ಇಲಾಖೆಯಲ್ಲಿ ಮಾತ್ರವಲ್ಲ ಉಳಿದ ಇಲಾಖೆಗಳಲ್ಲೂ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಸರ್ವರ್ ಸರಿ ಇಲ್ಲ, ದಾಖಲೆಗಳು ಅಪ್ಲೋಡ್ ಆಗುತ್ತಿಲ್ಲ ಎಂಬ ಸಬೂಬು ಹೇಳುತ್ತ ಜನರ ಸಮಯ ವ್ಯರ್ಥಗೊಳಿಸಲಾಗುತ್ತಿದೆ.
ಸಾರಿಗೆ ಇಲಾಖೆಯಲ್ಲಿ ಸ್ಮಾರ್ಟ್ ಆರ್ಸಿ ಕಾರ್ಡ್ ಪಡೆಯಲು ಹಲವು ತಿಂಗಳುಗಳ ಕಾಲ ಕಾಯಬೇಕಿದೆ. ತಂತ್ರಜ್ಞಾನವನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಇಲಾಖೆಗಳು ಕೊರತೆಗಳನ್ನು ಸರಿಪಡಿಸಿಕೊಳ್ಳಬೇಕು. ಮುಖ್ಯವಾಗಿ, ಜನರ ಸಮಸ್ಯೆ, ಅಹವಾಲಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಸ್ಪಂದಿಸುವುದು ಅತ್ಯಗತ್ಯ.