

ಅಪರಾಧ ಪ್ರಕರಣಗಳ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದದ್ದು. ಹಬ್ಬ ಹರಿದಿನಗಳಿದ್ದರೂ ರಜೆ ತೆಗೆದುಕೊಳ್ಳದೆ ಸಮಾಜವನ್ನು ಕಾಯುವ ಪೊಲೀಸರಿಗೂ ವೈಯಕ್ತಿಕ ಬದುಕಿನಿಂದ ಸದಾ ಕಾಲ ವಂಚಿತರು ಎಂದು ಬೇರೆ ಹೇಳಬೇಕಿಲ್ಲ. ಅವರಿಗೂ ಹೆಂಡತಿ-ಮಕ್ಕಳು, ತಂದೆ-ತಾಯಿ, ಬಂಧು-ಬಳಗ ಇರುತ್ತಾರೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಅವರಿಗೂ ಕುಟುಂಬದ ಜತೆ ನೆಮ್ಮದಿಯ ಬದುಕು ಸಾಗಿಸಲು ಬೇಕಾದ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಕೆಲಸ. ಆದರೆ, ಪೊಲೀಸ್ ಸೇವೆಗೆ ಸೇರಿ ಏಳೆಂಟು ವರ್ಷಗಳು ಉರುಳಿದರೂ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ವಯಸ್ಸಾದ ತಂದೆ-ತಾಯಿಯ ಆರೈಕೆ ಮಾಡುತ್ತಾ, ಅವರೊಟ್ಟಿಗೆ ಬದುಕುವ ಯೋಗ ಸಾವಿರಾರು ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಸಿಕ್ಕಿಲ್ಲ.
‘7 ವರ್ಷ ಸೇವೆ ಪೂರೈಸಿರುವ ನಮಗೂ ಅಂತರ್ ಜಿಲ್ಲಾ ವರ್ಗಾವಣೆ ಭಾಗ್ಯ ಕಲ್ಪಿಸಿಕೊಡಿ. ವಯಸ್ಸಾದ ತಂದೆ-ತಾಯಿಯ ಜತೆಗಿರುವ ಭಾಗ್ಯ ದೊರಕಿಸಿಕೊಡಿ’ ಎಂದು ಪೊಲೀಸ್ ಕಾನ್ಸ್ಟೆಬಲ್ಗಳು ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದಾರೆ. ಇನ್ನೊಂದೆಡೆ, ‘ನಮ್ಮ ಮಕ್ಕಳ ವರ್ಗಾವಣೆ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂಬುದಾಗಿ ಪೊಲೀಸ್ ಕುಟುಂಬಗಳು ಎಚ್ಚರಿಸಿವೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ವರ್ಗಾವಣೆಗಾಗಿ ಹಲವು ವರ್ಷದಿಂದ ಕಾಯುತ್ತಿದ್ದರೂ ತಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏಳು ವರ್ಷ ಸೇವೆ ಪೂರೈಸಿದ ಸಾಮಾನ್ಯ ಪೊಲೀಸ್ ವರ್ಗ ಹಾಗೂ ಮೂರು ವರ್ಷ ಪೂರೈಸಿದ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು 2023 ಮಾ. 3ರಿಂದ ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಸಿಬ್ಬಂದಿಗೆ ಅನುಕೂಲವಾಗುವಂತಹ ಒಂದಷ್ಟು ನಿಯಮಗಳನ್ನೂ ಜಾರಿಗೊಳಿಸಲಾಗಿತ್ತು. ಅದರಂತೆ ಅಂದಾಜು 4000 ಪೊಲೀಸ್ ಸಿಬ್ಬಂದಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆಪ್ ಮೂಲಕ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ವರ್ಗಾವಣೆ ಪ್ರಕ್ರಿಯೆ ಆರಂಭವೇ ಆಗಿಲ್ಲ. ‘ಅಂತರ್ ಜಿಲ್ಲಾ ವರ್ಗಾವಣೆ ಬಯಸಿರುವವರಲ್ಲಿ ಬಹುತೇಕ ಸಿಬ್ಬಂದಿ ಉತ್ತರ ಕರ್ನಾಟಕ ಭಾಗದವರಾಗಿದ್ದಾರೆ. ಒಂದು ವೇಳೆ ವರ್ಗಾವಣೆಗೊಳಿಸಿದರೆ ಒಂದೇ ಬಾರಿಗೆ ಎಲ್ಲರೂ ಉತ್ತರ ಕರ್ನಾಟಕ ಜಿಲ್ಲೆಗಳ ಠಾಣೆಗಳಿಗೆ ಹೋಗುತ್ತಾರೆ. ಬೆಂಗಳೂರಿನಂತಹ ಬೃಹತ್ ನಗರದ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತದೆ’ ಎಂದು ಸರ್ಕಾರ ಹೇಳುತ್ತಿದೆ. ಆದರೆ, ‘ಸೇವಾ ಜೇಷ್ಠತೆ ಆಧಾರದಲ್ಲಿ ಹಂತಹಂತವಾಗಿ ವರ್ಗಾವಣೆ ಮಾಡಿದರೆ ಯಾವುದೇ ರೀತಿ ಸಿಬ್ಬಂದಿ ಸಮಸ್ಯೆ ಉದ್ಭವಿಸುವುದಿಲ್ಲ’ ಎಂಬುದು ಪೊಲೀಸರ ವಾದವಾಗಿದೆ.
‘ಸ್ವಂತ ಊರುಗಳನ್ನು ತೊರೆದು ಹಲವಾರು ವರ್ಷಗಳಿಂದ ಬೇರೆಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ವಯಸ್ಸಾದ ಪಾಲಕರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ಪೊಲೀಸ್ ಕೆಲಸವನ್ನು ಮನಃಪೂರ್ವಕವಾಗಿ ಮಾಡಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇವೆ’ ಎಂದು ಪೊಲೀಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಸಮಾಜದ ರಕ್ಷಣೆಗೆ ಪೊಲೀಸ್ ಸೇವೆ ಅನಿವಾರ್ಯವಾಗಿರುವುದರಿಂದ ಅವರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲು ರಾಜ್ಯ ಸರ್ಕಾರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು.