

ಪಿರಿಯಾಪಟ್ಟಣ: ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಸಿ.ವಿಕ್ರಂರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಸೋಮವಾರ ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಾರತೀಯ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಕ್ಷಣೆಗಾಗಿ ಸೈನಿಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ದೇಶಕ್ಕಾಗಿ ಸೈನಿಕರ ಸೇವೆ ಅನನ್ಯವಾದುದು. ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಜನರಲ್ ಕಾರ್ಯಪ್ಪ ಅವರು ಭಾರತೀಯ ಪ್ರಥಮ ಸೇನಾಧ್ಯಕ್ಷರಾಗಿ ಪದಗ್ರಹಣ ಮಾಡಿದ ದಿನವನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಮಿಡ್‌ಟೌನ್ ಅಧ್ಯಕ್ಷ ಟಿ.ರಾಜೇಗೌಡ ಮಾತನಾಡಿ, ರೈತರು ಹಾಗೂ ಸೈನಿಕರು ಈ ದೇಶದ ಬೆನ್ನೆಲುಬು ಆಗಿದ್ದಾರೆ. ರೈತರು ಬೆಳೆ ಬೆಳೆದು ದೇಶದ ಜನರಿಗೆ ಆಹಾರ ನೀಡುತ್ತಿದ್ದಾರೆ. ಹಾಗೆಯೇ ಸೈನಿಕರು ನಮಗೆ ರಕ್ಷಣೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಮಾಜಿ ಸೈನಿಕರಾದ ಮುದ್ದಪ್ಪ, ಸೋಮಣ್ಣ, ಕೆ.ಸಿ.ಚಂದ್ರಪ್ಪ, ಕೃಷ್ಣಕುಮಾರ್ ಮತ್ತು ಎನ್.ಮಲ್ಲಯ್ಯ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರಾದ ಸತ್ಯನಾರಾಯಣ್, ಬಿ.ವಿ.ಜವರೇಗೌಡ, ಹೆಗ್ಡೆ, ವಿನಯ್ ಶೇಖರ್, ಸುನೀಲ್ ಕುಮಾರ್, ತಿಲಕ್, ಎಂ.ಎಂ.ರಾಜೇಗೌಡ, ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಿನ್ನಪ್ಪ, ಪಿರಿಯಾಪಟ್ಟಣ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ, ಸುಬ್ರಹ್ಮಣ್ಯ, ಧ್ರುವರಾಜ್, ಉತ್ತಪ್ಪ, ರಮೇಶ್, ಬಾಲಕೃಷ್ಣ ಇತರರು ಇದ್ದರು.