ಮಧ್ಯಭಾರತದ ಸೈನಿಕರು ಮತ್ತು ದ್ವಂದ್ವಯುದ್ಧ

-679fa7ab6ac1d
Published on
ಶ್ರೀ ವಸಿಷ್ಠರು ಶ್ರೀರಾಮನಿಗೆ ನೀಡುತ್ತಿರುವ ಉಪದೇಶದಲ್ಲಿ ಅನೇಕ ಅದ್ಭುತ ವಿಷಯಗಳು ಈಗಾಗಲೇ ಬಂದಿವೆ. ಇನ್ನು ಮುಂದೆಯೂ ಬರಲಿವೆ. ಅಧ್ಯಾತ್ಮವೆಂಬ ವಿಷಯವೇ ಹಾಗೆ. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಒಳಗೆ ಅನೇಕ ಅದ್ಭುತ ವಿಷಯಗಳನ್ನು ಒಳಗೊಂಡಿದೆ.

ಭಗವದ್ಗೀತೆಯಲ್ಲಿ ಅರ್ಜುನನು ಕಂಡ ವಿಶ್ವರೂಪವು ಅದಕ್ಕೊಂದು ಪ್ರಸಿದ್ಧ ಉದಾಹರಣೆ. ಅಲ್ಲಿ ಅವನಿಗೆ ಹಿಂದೆ ಕಂಡಿರದ, ಕೇಳಿರದ ಅನೇಕ ಆಶ್ಚರ್ಯಗಳು, ಅದ್ಭುತಗಳು ಕಂಡವು. ಭಗವಂತನ ಅದ್ಭುತ ಉಗ್ರ ಸ್ವರೂಪವನ್ನು ನೋಡಿ ಅರ್ಜುನನು ಆಶ್ಚರ್ಯಗೊಂಡಿದ್ದು, ರೋಮಾಂಚನಗೊಂಡಿದ್ದು ಮಾತ್ರವಲ್ಲ, ಅತ್ಯಂತ ಭಯಭೀತನಾಗಿದ್ದನು. ಇದನ್ನು ಅವನೇ ಭಗವಂತನಲ್ಲಿ ನಿವೇದಿಸಿಕೊಂಡಿದ್ದಾನೆ.

‘ಭಯೇನ ಚ ಪ್ರವ್ಯಥಿತಂ ಮನೋ ಮೇ’. ಯೋಗವಾಸಿಷ್ಠದಲ್ಲಿ ಹಿಂದೆ ಬಂದಿರುವ ಬ್ರಹ್ಮಾಂಡಗಳ ವರ್ಣನೆ, ಲೀಲಾಮಹಾರಾಣಿಯು ತನ್ನ ಹಿಂದಿನ ನೂರಾರು ಜನ್ಮಗಳನ್ನು ನೆನಪಿಸಿಕೊಂಡ ರೀತಿ ಮುಂತಾದವುಗಳು ಅದ್ಭುತವಾಗಿವೆ. ಈಗ ನಡೆಯುತ್ತಿರುವ ಭಯಂಕರ ಯುದ್ಧದ ವರ್ಣನೆ ಇದಕ್ಕೆ ಇನ್ನೊಂದು ಉದಾಹರಣೆ. ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಭರತಖಂಡದಲ್ಲಿ ಜನಿಸಿದ್ದು, ವಿದೂರಥನೆಂಬ ಹೆಸರಿನಿಂದ ಚಕ್ರವರ್ತಿಯಾಗಿ ರಾಜ್ಯವನ್ನು ಆಳುತ್ತಿದ್ದಾನೆ.

ಅವನ ಸಾಮಂತರಲ್ಲಿ ಒಬ್ಬನಾದ ಸಿಂಧುರಾಜನ ಕುತಂತ್ರದಿಂದ ಈಗ ಘನಘೊರ ಸಂಗ್ರಾಮ ನಡೆಯುತ್ತಿದೆ. ಯುದ್ಧವನ್ನು ಅನೇಕ ರೀತಿಯಲ್ಲಿ ವಿವರಿಸುತ್ತಿರುವ ಶ್ರೀ ವಸಿಷ್ಠರು ಈಗ ಎರಡೂ ಪಕ್ಷಗಳಲ್ಲಿರುವ ಬೆಂಬಲಿಗ ದೇಶಗಳ ವಿಸ್ತಾರವಾದ ಯಾದಿಯನ್ನು ಕೊಡುತ್ತಿದ್ದಾರೆ. ಭಾರತ ದೇಶದ ಪೂರ್ವದಿಕ್ಕಿನಿಂದ ಆರಂಭಿಸಿ ಆಗ್ನೇಯ, ದಕ್ಷಿಣ, ನಿರ್​ಋತಿ , ಪಶ್ಚಿಮ, ವಾಯವ್ಯ ಮತ್ತು ಉತ್ತರ ದಿಕ್ಕಿನ ರಾಜ್ಯಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಈಗ ಕೊನೆಯದಾಗಿ ಈಶಾನ್ಯ ದಿಕ್ಕಿನ ರಾಜ್ಯಗಳ ಪಟ್ಟಿಯನ್ನು ಕೊಡುವುದು ಬಾಕಿ ಉಳಿದಿದೆ. ನೂರಾರು ಸಣ್ಣ ಸಣ್ಣ ರಾಜ್ಯಗಳು ಆ ಕಾಲದಲ್ಲಿ ಇದ್ದವು ಎಂಬುದು ಇದರಿಂದ ಗೊತ್ತಾಗುತ್ತದೆ.

ಶ್ರೀ ವಸಿಷ್ಠರು ಉಪದೇಶ ಮುಂದುವರಿಸಿದರು. ‘ಶ್ರೀರಾಮ! ಈಗ ಈಶಾನ್ಯ ದಿಕ್ಕಿನಲ್ಲಿರುವ ರಾಜ್ಯಗಳನ್ನು ಹೇಳುತ್ತೇನೆ ಕೇಳು! ಕಾಲುತಾ, ಬ್ರಹ್ಮಪುತ್ರ, ಕುಣಿದ, ಖದಿನ, ಮಾಲವ, ರಂಧ್ರ ರಾಜ್ಯ, ವನ, ರಾಷ್ಟ್ರ, ಕೇಡವಸ್ತ, ಸಿಂಹಪುತ್ರ, ವಾಮನ (ಈ ರಾಜ್ಯದ ಜನರು ಗಿಡ್ಡ ಶರೀರ ಉಳ್ಳವರು), ಸಾವಾಕಚ, ಚಾಪಲವಹ, ಕಾಮಿರ, ದರದ, ಅಭಿಸಾಸದ, ಜಾರ್ವಾಕ, ಪಲೋಲ, ಕುವಿಕೌತುಕ, ಕಿರಾತ, ಯಾಮುಪಾತ, ದೀನ, ಸ್ವರ್ಣಮಹೀ (ಈ ದೇಶದ ಮಣ್ಣಿನ ಬಣ್ಣ ಚಿನ್ನದಂತೆ ಇರುವುದರಿಂದ ಈ ದೇಶಕ್ಕೆ ಈ ಹೆಸರು ಬಂದಿದೆ.) ಎಂಬ ದೇಶಗಳು ಇವೆ. ಈ ಎಲ್ಲ 24 ದೇಶಗಳು ಸಿಂಧುರಾಜನ ಬೆಂಬಲಕ್ಕೆ ನಿಂತಿವೆ.’

‘ಈ ಸ್ವರ್ಣಮಹೀ ದೇಶದ ಆಚೆಗೆ ದೇವತೆಗಳು ವಾಸಿಸುವ ಉಪವನ ಪ್ರದೇಶವಿದೆ. ಅದರ ಆಚೆಗೆ ಅತ್ಯಂತ ಶೋಭೆಯಿಂದ ಕೂಡಿದ ಉತ್ತಮವಾದ ವಿಶ್ವಾವಸು (ಒಬ್ಬ ದೇವಗಂಧರ್ವ) ವಿನ ಮಂದಿರವಿದೆ. ಮತ್ತೂ ಮುಂದೆ ಕೈಲಾಸಪರ್ವತ ಪ್ರದೇಶವಿದೆ. ಅನಂತರ ಮಂಜುವನವೆಂಬ ಪರ್ವತವಿದೆ. ವಿದ್ಯಾಧರರು ಮತ್ತು ಉಳಿದ ದೇವತೆಗಳ ವಿಮಾನಗಳಿಗೆ ಸಮಾನವಾದ ಭೂಮಿ ಈ ಪರ್ವತದಲ್ಲಿದೆ. (ವಿದ್ಯಾಧರರ ಮತ್ತು ದೇವತೆಗಳ ವಿಮಾನಗಳು ಆಕಾಶದಲ್ಲಿ ಸಂಚರಿಸುತ್ತವೆ. ಅಷ್ಟು ಎತ್ತರದ ಭೂಮಿ ಈ ಪ್ರದೇಶವಾಗಿದೆ.)’

ಶ್ರೀ ವಸಿಷ್ಠರು ಈಗ ಮುಂದುವರಿದು ಮಧ್ಯಭಾರತದ ದೇಶಗಳನ್ನು ಹೇಳುತ್ತಿದ್ದಾರೆ. ಮಧ್ಯಭಾರತದ ಈ ದೇಶಗಳೆ ಲ್ಲವೂ ವಿದೂರಥನ ಪಕ್ಷಕ್ಕೆ ಸೇರಿದವು. ‘ಶ್ರೀರಾಮ! ರಣರಂಗದಲ್ಲಿ ಯುದ್ಧವು ರಭಸವಾಗಿ ಮುಂದುವರಿದಿದೆ. ಅನೇಕ ನರರು ಮತ್ತು ಆನೆಗಳು ಆ ರಭಸಕ್ಕೆ ಕತ್ತರಿಸಲ್ಪಟ್ಟು ಬಿದ್ದಿರುವ ದೃಶ್ಯವು ದಾರುಣವಾಗಿ ಕಾಣುತ್ತಿದೆ. ಆದರೂ ತಾ ಮುಂದೆ, ತಾ ಮುಂದೆ ಎಂಬ ಯುದ್ಧೋ ತ್ಸಾಹದಲ್ಲಿ ಗುಂಪುಗುಂಪಾಗಿ ಸೈನ್ಯಗಳು ಮುಂದೆ ಬರುತ್ತಿವೆ. ಹೀಗೆ ಮುಂದೆ ಬರುತ್ತಿರುವ ಗುಂಪುಗಳು ಆಯುಧಗಳ ಪ್ರಹಾರಕ್ಕೆ ಒಳಗಾಗಿ ಬೀಳುತ್ತಿವೆ. ಹೀಗಾಗಿ ಈಗ ಹೇಳಿದ ಅನೇಕ ದೇಶಗಳ ಸೈನಿಕರು ಮತ್ತು ಇನ್ನೂ ಅನೇಕ ಸೈನಿಕರು ಯುದ್ಧಾಗ್ನಿಯಲ್ಲಿ ಭಸ್ಮವಾಗುತ್ತಿದ್ದಾರೆ. ಸ್ವಪ್ರಯತ್ನದಿಂದಲೇ ಮುಂದೆ ಬಂದು ಬೆಂಕಿಯಲ್ಲಿ ಬೀಳುವ ಪತಂಗಗಳಂತೆ ಸೈನಿಕರು ಯುದ್ಧಾಗ್ನಿಯಲ್ಲಿ ಬೀಳುತ್ತಿದ್ದಾರೆ.

‘ಈಗ ಮಧ್ಯಭಾರತದ ದೇಶಗಳನ್ನು (ರಾಜ್ಯಗಳನ್ನು) ಹೇಳುವುದು ಬಾಕಿ ಉಳಿದಿದೆ. ಈ ದೇಶಗಳೆಲ್ಲವೂ ವಿದೂರಥ (ಲೀಲಾಮಹಾರಾಣಿಯ ಪತಿ) ನ ಬೆಂಬಲಿಗರು. ಅವುಗಳನ್ನು ಹೇಳುತ್ತೇವೆ ಕೇಳು! ತದ್ದೇಹಿಕ, ಶೂರಸೇನ, ಗುಡ, ಅಶ್ವಘನಾಯಕ, ಉತ್ತಮ ಜ್ಯೋತಿ ಭದ್ರ, ಮದ ಮಧ್ಯಮಿಕ ಮುಂತಾದವರು, ಸಾಲೂಕ, ಉದ್ಯಮ, ಆಲಾಸ್ಯ, ದೌರ್ಜ್ಞೆಯ, ಪಿಪ್ಪಲಾಯನ, ಮಾಂಡವ್ಯ, ಪಾಂಡುನಗರ, ಸೌಗ್ರೀವರೇ ಮೊದಲಾದವರು, ಗುರುಗ್ರಹ, ಪಾರಿಯಾತ್ರ, ಕುರಾಷ್ಟ್ರ, ಯಾಮುನ, ಉದುಂಬರ, ರಾಜ್ಯಾಹ್ವ, ಉಜ್ಜಿಹಾನ, ಕಾಲಕೋಟಿಕ, ಮಾಥುರ, ಪಾಂಚಾಲ, ಧರ್ವರಣ್ಯ, ಉತ್ತರಪಾಂಚಾಲ, ದಕ್ಷಿಣಪಾಂಚಾಲ, ಕುರುಕ್ಷೇತ್ರ ಮತ್ತು ಸಾರಸ್ವತ ಜನರು, ಹೀಗೆ 29 ದೇಶದವರು ವಿದೂರಥನ ಕಡೆ ಇದ್ದಾರೆ.’

ಇನ್ನು ಯುದ್ಧಾಗ್ನಿಯಲ್ಲಿ ಭಸ್ಮವಾದ ಸೇನಾಸಮೂಹಗಳನ್ನು ಮತ್ತು ಅವು ಭಸ್ಮವಾದ ರೀತಿಯನ್ನು ವಿವರಿಸುತ್ತಿದ್ದಾರೆ. ‘ಶ್ರೀರಾಮ! ಅವಂತೀ (ಉಜ್ಜಯಿನೀ, ಇದು ಮಾಲವದೇಶದಲ್ಲಿ ಪ್ರಸಿದ್ಧವಾಗಿದೆ) ಪ್ರದೇಶದ ರಥಗಳ ಸಾಲು ಕುಂತಿ ದೇಶದ ಸೈನಿಕರ ಮತ್ತು ಪಾಂಚನದ ಸೈನಿಕರ ಯುದ್ಧದ ರಭಸದಿಂದ ಪ್ರಯೋಗಿಸಲ್ಪಟ್ಟ ಆಯುಧಗಳಿಂದ ಭಯಗೊಂಡು ಓಡುತ್ತಾ ದೊಡ್ಡದಾದ ಪರ್ವತ ಪ್ರಪಾತದಲ್ಲಿ ಬಿದ್ದು ಹೋಯಿತು.

ಹಾಗೆಯೇ ಕೋಶ ಬ್ರಹ್ಮಾವಸಾನರು ವಸ್ತ್ರವತೀ ಜನರಿಂದ ಕತ್ತರಿಸಲ್ಪಟ್ಟು ಭೂಮಿಯಲ್ಲಿ ಬಿದ್ದರು. ಅವರ ಮದಿಸಿದ ಆನೆಗಳೂ ಬಿದ್ದುಹೋದವು. ಶೂರರಾದ ದಾಶಪುರರು ಬಾಣಕ್ಷಿತಿಗಳೆಂಬ ಸೈನಿಕರಿಂದ ಆಕ್ರಮಿಸಲ್ಪಟ್ಟು ಶಸ್ತ್ರಗಳಿಂದ ಅವರ ಹೊಟ್ಟೆ, ಭುಜಗಳು ಕತ್ತರಿಸಲ್ಪಟ್ಟವು. ಅಲ್ಲದೇ ದಾಶಪುರರನ್ನು ಬಾಣಕ್ಷಿತಿಗಳು ಯೋಜನದಷ್ಟು ದೂರ ಬೆನ್ನಟ್ಟಿಕೊಂಡು ಹೋದರು. ಓಡುತ್ತಾ ಸಾಗಿದ ದಾಶಪುರರು ಒಂದು ಸರೋವರದಲ್ಲಿ ಬಿದ್ದುಹೋದರು. ಶಾಂತಿಕರೆಂಬ ಸೈನಿಕರ ಪರಿಸ್ಥಿತಿಯಂತೂ ತುಂಬಾ ಶೋಚನೀಯ. ಸೀಳಲ್ಪಟ್ಟ ಹೊಟ್ಟೆಯಿಂದ ಹೊರಬಂದ ಕರುಳೆಂಬ ಹಗ್ಗದಿಂದಲೇ ಕಟ್ಟಲ್ಪಟ್ಟ ಅವರು ಮುನ್ನಡೆಯಲಾರದೇ ಇದ್ದವರಾದರು. (ಹೊಟ್ಟೆಯಿಂದ ಕರುಳು ಹೊರಬರುವಷ್ಟು ತೀವ್ರವಾದ ಆಕ್ರಮಣಕ್ಕೆ ಒಳಗಾಗಿ ಅವರು ನೆಲದಲ್ಲಿ ಬಿದ್ದು ಹೋದರು.) ರಾತ್ರಿ ಬಂದ ನಂತರ ಪಿಶಾಚಗಳು ಬಂದು ಅವರ ಶರೀರಗಳನ್ನು ತಿಂದುಹಾಕಿದವು.’

(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net