ರಜೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

Published on

ಗೋಣಿಕೊಪ್ಪಲು: ರಜೆಗೆ ಮನೆಗೆ ಬಂದಿದ್ದ ಯೋಧರೊಬ್ಬರು ಪ್ರಯಾಣಿಸುತ್ತಿದ್ದ ಕಾರು ಗೋಣಿಕೊಪ್ಪಲಿನ ಚೆನ್ನಂಗೊಲ್ಲಿ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಪೊನ್ನಪ್ಪಸಂತೆಯ ನಿವಾಸಿ ಬಿದ್ದಮಾಡ ಬಿಪಿನ್ ಭೀಮಯ್ಯ (36) ಮೃತರು. ಸೋಮವಾರ ಗೋಣಿಕೊಪ್ಪಕ್ಕೆ ಮದುವೆ ಸಮಾರಂಭಕ್ಕೆ ಬಂದಿದ್ದ ಬಿಪಿನ್ ಭೀಮಯ್ಯ ವಾಪಸ್ ಮನೆಗೆ ತೆರಳುತ್ತಿದ್ದಾಗ ಇವರಿದ್ದ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಮಂಗಳವಾರ ಮಧ್ಯಾಹ್ನ ಕೊಡವ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ಬಿಪಿನ್ ಭೀಮಯ್ಯ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net