

ನವದೆಹಲಿ: ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ತೀವ್ರವಾದ ಸೌರ ಮಾರುತವು ಭೂಮಿಯನ್ನು ಅಪ್ಪಳಿಸಿದ್ದು, ಭಾರತ ಸಹಿತ ಜಗತ್ತಿನ ಅನೇಕ ಭಾಗಗಳಲ್ಲಿ ವಿಶಿಷ್ಟ ಕಾಂತಿ (ನಾರ್ದರ್ನ್ ಲೈಟ್ಸ್) ಸೃಷ್ಟಿಯಾಗಿದೆ. ಸೌರ ಮಾರುತದಿಂದ ವಿದ್ಯುತ್ ಮತ್ತು ಸಂವಹನ ವ್ಯವಸ್ಥೆಗಳು ಅಸ್ತವ್ಯಸ್ತಗೊಳ್ಳುವ ಸಂಭವ ಇದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ಪರಿಸರ ಆಡಳಿತ (ಎನ್ಒಎಎ) ಎಚ್ಚರಿಕೆ ನೀಡಿದೆ.
ತೀಕ್ಷ್ಣವಾದ ಸೌರ ಮಾರುತವು ಶುಕ್ರವಾರ ನಿರೀಕ್ಷೆಗಿಂತ ಕೆಲವು ಗಂಟೆ ಮೊದಲೇ ಭೂಮಿಯನ್ನು ಅಪ್ಪಳಿಸಿದಾಗ ಅಪರೂಪದ ತೀವ್ರವಾದ ಭೂಕಾಂತೀಯ ಅಲೆ ಉಂಟಾಯಿತು ಎಂದು ಎನ್ಒಎಎ ಹೇಳಿದೆ. ಇದರ ಪರಿಣಾಮಗಳು ಮುಂದಿನ ವಾರವೂ ಮುಂದುವರಿಯುವ ಸಂಭವವಿದೆ. ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಇಂಧನ ಸ್ಥಾವರಗಳು ಮತ್ತು ಭೂಮಿಯ ಕಕ್ಷೆಯಲ್ಲಿರುವ ಬಾಹ್ಯಾಕಾಶ ನೌಕೆಗಳ ನಿರ್ವಾಹಕರಿಗೆ ಎನ್ಒಎಎ ಮಾತ್ರವಲ್ಲದೆ ಫೆಡರಲ್ ತುರ್ತಸ್ಥಿತಿ ನಿರ್ವಹಣಾ ಸಂಸ್ಥೆ (ಎಫ್ಇಎಂಎ) ಕೂಡ ಎಚ್ಚರಿಕೆ ನೀಡಿದೆ.
ಹೆಚ್ಚಿನ ಅಪಾಯವಿಲ್ಲವೆಂದ ತಜ್ಞ: ‘ಭೂಮಿ ಮೇಲಿರುವ ಬಹುತೇಕ ಜನರಿಗೆ ಸೌರ ಮಾರುತದಿಂದ ಯಾವುದೇ ತೆಂದರೆಯಾಗದು’ ಎಂದು ಎನ್ಒಎಎಯ ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರದ ವಿಜ್ಞಾನಿ ರಾಬ್ ಸ್ಟೀನ್ಬರ್ಗ್ ಹೇಳಿದ್ದಾರೆ. ಅಮೆರಿಕದ ದಕ್ಷಿಣ ಭಾಗದ ಅಲಬಾಮಾ ಮತ್ತು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಾರ್ದರ್ನ್ ಲೈಟ್ಸ್ (ಔರಾ) ಉಂಟಾಗಬಹುದು ಎಂದು ಎನ್ಒಎಎ ಹೇಳಿದೆ. ಆದರೆ ಅದರ ಬಗ್ಗೆ ನಿಖರವಾಗಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾರ್ದರ್ನ್ ಲೈಟ್ಸ್ನ ಲಕ್ಷಣವಾದ ನಾಟಕೀಯ ಬೆಳಕಿನ ಪರದೆ ಆಗಿರಲಾರದು. ಆದರೆ ಹಸಿರು ಬಣ್ಣದ ಚಿಮ್ಮುವಿಕೆ ಕಂಡುಬರಬಹುದು ಎಂದು ತಜ್ಞರು ಹೇಳಿದ್ದಾರೆ.
ಪ್ರಕೃತಿಯ ಕೊಡುಗೆ: ‘ಬೆಳಕಿನ ಕಾಂತೀಯ ವಲಯ ನಿಜವಾಗಿಯೂ ಪ್ರಕೃತಿಯ ಕೊಡುಗೆಯಾಗಿದೆ’ ಎಂದು ಸ್ಟೀನ್ಬರ್ಗ್ ಉದ್ಗರಿಸಿದ್ದಾರೆ. ಫೋನ್ ಕ್ಯಾಮರಾಗಳಿಂದ ಈ ಕಾಂತಿಯ ಉತ್ತಮ ದೃಶ್ಯವನ್ನು ಕಾಣಬಹುದಾಗಿದೆ ಎಂದು ಸ್ಟೀನ್ಬರ್ಗ್ ಹಾಗೂ ಅವರ ಸಹೋದ್ಯೋಗಿಗಳು ಅಭಿಪ್ರಾಯ ಪಟ್ಟಿದ್ದಾರೆ. ಫೋನ್ ಕ್ಯಾಮರಾಗಳು ಬೆಳಕನ್ನು ಬರಿಗಣ್ಣಿಗಿಂತ ಚೆನ್ನಾಗಿ ಸೆರೆಹಿಡಿಯುವುದೇ ಇದಕ್ಕೆ ಕಾರಣವಾಗಿದೆ. ‘ಆಗಸದ ಚಿತ್ರವೊಂದನ್ನು ಕ್ಲಿಕ್ಕಿಸಿ. ಅಲ್ಲಿ ನಿಮ್ಮ ಕಣ್ಣಿಗೊಂದು ಹಬ್ಬ ಕಾದಿರಬಹುದು’ ಎಂದು ಮುನ್ಸೂಚನೆ ಕೇಂದ್ರದ ಕಾರ್ಯಾಚರಣೆಗಳ ಮುಖ್ಯಸ್ಥ ಮೈಕ್ ಬೆಟ್ವಿ ಹೇಳಿದ್ದಾರೆ. ದಾಖಲಿತ ಇತಿಹಾಸದ ಪ್ರಕಾರ 1859ರಲ್ಲಿ ಅತ್ಯಂತ ತೀವ್ರವಾದ ಸೌರ ಮಾರುತ ಅಪ್ಪಳಿಸಿದ್ದು ಮಧ್ಯ ಅಮೆರಿಕವಲ್ಲದೆ ಹವಾಯ್ನಲ್ಲಿ ಕೂಡ ಬೆಳಕಿನ ಕಾಂತಿಯ ಪರದೆ ಸೃಷ್ಟಿಯಾಗಿತ್ತು.
ಲಡಾಖ್ ಆಗಸದಲ್ಲಿ ಕಾಮನಬಿಲ್ಲು: ಸೌರ ಕಾಂತೀಯ ಅಲೆ ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿ ಭಾರತದ ಲಡಾಖ್ ಆಗಸದಲ್ಲಿ ಶನಿವಾರ ಅತ್ಯಪರೂಪದ ಬೆಳಕಿನ ಕಾಂತೀಯ ಕಮಾನು ಸೃಷ್ಟಿಯಾಗಿತ್ತು. ಹಿಮಾಲಯದ ಎತ್ತರದ ಪ್ರದೇಶದಲ್ಲಿರುವ ಹ್ಯಾನ್ಲೆ ಡಾರ್ಕ್ ಸ್ಕೈ ರಿಸರ್ವ್ನಲ್ಲಿ ಕಪು್ಪ ಆಕಾಶದಲ್ಲಿ ಕಡುಗೆಂಪು ವರ್ಣದ ಕಾಂತೀಯ ಕಾಮನಬಿಲ್ಲು ಸೃಷ್ಟಿಯಾಯಿತು. ಲಡಾಖ್ ಆಗಸದಲ್ಲಿ ಶುಕ್ರವಾರ ಮಧ್ಯ ರಾತ್ರಿ ಕಳೆದು ಒಂದು ಗಂಟೆಗೆ ಕಾಣಿಸಿಕೊಂಡ ಔರಾ ಮುಂಜಾನೆ ವರೆಗೂ ಮುಂದುವರಿಯಿತು. ಉತ್ತರಾರ್ಧ ಗೋಳದ ಹಲವು ಎತ್ತರದ ಪ್ರದೇಶಗಳಲ್ಲಿ ನಯನಮನೋಹರ ಔರಾ ಕಾಣಿಸಿಕೊಂಡು ನೋಡುಗರಿಗೆ ಅತ್ಯಾನಂದ ಉಂಟು ಮಾಡಿತು. ಆಸ್ಟ್ರಿಯಾ, ಜರ್ಮನಿ, ಸ್ಲೊವಾಕಿಯಾ, ಸ್ವಿಜರ್ಲೆಂಡ್, ಡೆನ್ಮಾರ್ಕ್ ಮತ್ತು ಪೋಲಂಡ್ನಲ್ಲೂ ಇದು ಗೋಚರವಾಗಿತ್ತು.
800 ಕಿಮೀ ವೇಗ: ಕೆಲವು ಸೌರ ಜ್ವಾಲೆಗಳು ಪ್ರತಿ ಸೆಕೆಂಡ್ಗೆ 800 ಕಿ.ಮೀ.ವೇಗದಲ್ಲಿ ಭೂಮಿಯತ್ತ ಚಲಿಸುತ್ತವೆ ಎಂದು ಕೋಲ್ಕತದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸ್ಪೇಸ್ ಸೈನ್ಸಸ್ ಇನ್ ಇಂಡಿಯಾ (ಸಿಇಎಸ್ಎಸ್ಐ) ವಿಜ್ಞಾನಿಗಳು ತಿಳಿಸಿದ್ದಾರೆ.
ಐಎಸ್ಎಸ್ ಸುರಕ್ಷಿತ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) 7 ಗಗನಯಾನಿಗಳಿಗೆ ಸೌರ ಮಾರುತದಿಂದ ಯಾವುದೇ ಗಂಭೀರ ಅಪಾಯ ಎದುರಾಗಿಲ್ಲ. ಸೌರ ಜ್ವಾಲೆಗಳ ಸ್ಫೋಟ ಮತ್ತು ಸೌರ ಮಾರುತ ಮುಂತಾದ ಎಲ್ಲ ಚಟುವಟಿಕೆಗಳನ್ನು ಸೂರ್ಯನ ಅಧ್ಯಯನಕ್ಕೆಂದೇ ಮೀಸಲಾದ ಬಾಹ್ಯಾಕಾಶ ನೌಕೆ ಗಮನಿಸುತ್ತಿವೆ.
7 ಬಾರಿ ಸ್ಫೋಟ: ಸೂರ್ಯನಿಂದ ಬುಧವಾರದಿಂದಲೇ ಪ್ರಬಲವಾದ ಸೌರ ಜ್ವಾಲೆಗಳು ಉತ್ಪಾದನೆಯಾಗಿ ಪ್ಲಾಸ್ಮಾದ ಕನಿಷ್ಠ ಏಳು ಆಸ್ಪೋಟಗಳು ಉಂಟಾಗಿವೆ. ಕೊರೊನಲ್ ಮಾಸ್ ಇಜೆಕ್ಷನ್ ಎಂದು ಹೇಳಲಾಗುವ ಈ ಪ್ರತಿಯೊಂದು ಉತ್ಪಾತವೂ ಸೂರ್ಯನ ಬಾಹ್ಯ ವಾತಾವರಣ, ಅಥವಾ ಕೊರೊನಾದಿಂದ ಹೊಮ್ಮುವ ಶತಕೋಟಿಗಟ್ಟಲೆ ಟನ್ ಪ್ಲಾಸ್ಮಾ ಮತ್ತು ಆಯಸ್ಕಾಂತೀಯ ಕ್ಷೇತ್ರ ಒಳಗೊಂಡಿರುವ ಸಾಧ್ಯತೆಯಿರುತ್ತದೆ.
ಸೂರ್ಯನಲ್ಲಿ ಆಸ್ಪೋಟಗೊಳ್ಳುವ ಪ್ರಬಲ ಜ್ವಾಲೆಯ ಪರಿಣಾಮದಿಂದ ಉಂಟಾಗುವ ಸೌರ ಮಾರುತದಿಂದ ಪವರ್ ಗ್ರಿಡ್ಗಳ ಹೈ ವೋಲ್ಟೇಜ್ ಟ್ರಾನ್ಸ್ಮಿಶನ್ ಲೈನ್ಗಳಿಗೆ ಅಪಾಯವಾಗಬಹುದು. ಆದರೆ ಸಾಮಾನ್ಯವಾಗಿ ಮನೆಗಳಲ್ಲಿ ಕಂಡುಬರುವ ಇಲೆಕ್ಟಿ ್ರಲ್ ಲೈನ್ಗಳಿಗೆ ಯಾವುದೇ ಹಾನಿಯಾಗದು ಎಂದು ಎನ್ಒಎಎಯ ಹವಾಮಾನ ತಜ್ಞ ಶಾನ್ ದಹ್ಲ್ ವಿವರಿಸಿದ್ದಾರೆ.
. ಉಪಗ್ರಹಗಳಿಗೆ ಹಾನಿಯಾಗಿ ಅದರ ಪರಿಣಾಮದಿಂದ ಭೂಮಿಯ ಮೇಲೆ ನ್ಯಾವಿಗೇಶನ್ ಮತ್ತು ಸಂವಹನ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಬಹುದು.
. 2003ರ ತೀವ್ರ ಭೂಕಾಂತೀಯ ಅಲೆಯಿಂದಾಗಿ ಸ್ವೀಡನ್ನಲ್ಲಿ ವಿದ್ಯುತ್ ಕಟ್ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಪವರ್ ಟ್ರಾನ್ಸ್ ಫಾರ್ಮರ್ಗಳು ಹಾನಿಗೊಂಡಿದ್ದವು.
. ಸೌರ ಮಾರುತ ಮುಗಿದ ನಂತರವೂ ಜಿಪಿಎಸ್ ಉಪಗ್ರಹಗಳು ಮತ್ತು ಗ್ರೌಂಡ್ ರಿಸೀವರ್ಗಳ ನಡುವಿನ ಸಿಗ್ನಲ್ಗಳು ಅಸ್ತವ್ಯಸ್ತಗೊಳ್ಳಬಹುದು ಅಥವಾ ಕಳೆದುಹೋಗಲೂ ಬಹುದು.
.ವಿಕಿರಣ ಹೆಚ್ಚಳದಿಂದ ನಾಸಾದ ಕೆಲವು ಉಪಗ್ರಹಗಳಿಗೆ ಕೂಡ ಹಾನಿ ಸಂಭವಿಸಬಹುದು.