

ಬೆಂಗಳೂರು: ಕಾವೇರಿ 2.0ಗೆ ಮತ್ತೆ ಗ್ರಹಣ ಕವಿದಿದೆ. ತಂತ್ರಾಂಶ ಸಮಸ್ಯೆಯಿಂದ ಮೂರ್ನಾಲ್ಕು ದಿನದಿಂದ ಋಣಭಾರ ಪ್ರಮಾಣ ಪತ್ರ (ಇಸಿ) ವಿತರಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಜನ ಹೈರಾಣಾಗಿದ್ದಾರೆ.
ಬ್ಯಾಂಕ್ ಸಾಲ, ಆಸ್ತಿ ಖರೀದಿ, ಬಾಡಿಗೆ, ಕರಾರು ಒಪ್ಪಂದ ಸೇರಿ ನಾನಾ ಕೆಲಸಕ್ಕೆ ಇಸಿ ಅತ್ಯಗತ್ಯ. ಆಸ್ತಿ ಕಾನೂನು ಅಥವಾ ಹಣಕಾಸಿನ ಬಾಧ್ಯತೆಗೆ ಒಳಗಾಗಿದೆಯೇ ಅಥವಾ ಮುಕ್ತವಾಗಿದೆಯೇ ಎಂದು ದೃಢೀಕರಿಸಲು ಇಸಿ ಮುಖ್ಯ. ಇಸಿಯಲ್ಲಿ ಆಸ್ತಿಯ ಮೇಲೆ ಗುತ್ತಿಗೆ ಹಕ್ಕು, ಅಡಮಾನದ ಹಕ್ಕು, 3ನೇ ವ್ಯಕ್ತಿ ಹಕ್ಕು ಮತ್ತು ಇತರ ಶುಲ್ಕ ಬಾಕಿ ಇದ್ದಲ್ಲಿ ನಮೂದಾಗಿರುತ್ತದೆ. ಇಲ್ಲದಿದ್ದರೆ ಇಲ್ಲವೆಂದೇ ಮುದ್ರಿತವಾಗಲಿದೆ.
ಪ್ರತಿದಿನ ಸಾವಿರಾರು ಮಂದಿ ಉಪ ನೋಂದಣಿ ಕಚೇರಿಯಲ್ಲಿ ಇಸಿ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಇದರಿಂದ ಸರ್ಕಾರಕ್ಕೂ ಕೋಟ್ಯಂತರ ರೂ. ಆದಾಯ ಬರುತ್ತಿದೆ. ಆದರೆ, ಕಾವೇರಿ 2.0 ತಂತ್ರಾಂಶಕ್ಕೆ ಮತ್ತೆ ದೋಷ ಹಿಡಿದಿರುವುದರಿಂದ ಆದಾಯವೂ ನಿಂತಿದೆ. ಜತೆಗೆ ಆಸ್ತಿ ಮೇಲೆ ವ್ಯವಹಾರ ನಡೆದಿದ್ದರೂ ಎಂಟ್ರಿ ಆಗದೆ ಯಾವುದೇ ವ್ಯವಹಾರ ನಡೆದಿಲ್ಲ (ನಿಲ್)ಎಂದು ಇಸಿ ಜನರೇಟ್ ಆಗುತ್ತಿದೆ. ಇದರಿಂದ ಬ್ಯಾಂಕ್ ಮತ್ತು ಕೋರ್ಟ್ ಕಚೇರಿಗಳಿಗೆ ಇ.ಸಿ. ಸಲ್ಲಿಸಲು ಸಾಧ್ಯವಾಗದೆ ತೊಡಕಾಗಿದೆ.
ಶುಲ್ಕ ವ್ಯರ್ಥ: ಸಲ್ಲಿಸಿರುವ ಅರ್ಜಿಗಳಿಗೂ ನಿಲ್ ಇ.ಸಿ. ಬರುತ್ತಿರುವುದರಿಂದ ಸಾರ್ವಜನಿಕರಿಗೆ ಪಾವತಿ ಮಾಡಿರುವ ಶುಲ್ಕ ವ್ಯರ್ಥವಾಗುತ್ತಿದೆ. ಸಬ್‌ರಿಜಿಸ್ಟ್ರಾರ್ ಕಚೇರಿಗಳಿಗೆ ತೆರಳಿ ಅಧಿಕಾರಿ, ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ಕಾವೇರಿ 2.0ರಲ್ಲೇ ದೋಷ ಇರುವುದರಿಂದ ಅಧಿಕಾರಿಗಳು ಜನರಿಗೆ ಉತ್ತರ ಕೊಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಸಾಲ ವಿಳಂಬ: ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲು ಇ.ಸಿ. ಸಿಗದ ಪರಿಣಾಮ ಸಾಲ ಸಿಗುವುದು ವಿಳಂಬವಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮತ್ತು ಸೈಟ್, ಭೂಮಿ ಖರೀದಿದಾರರಿಗೂ ಇ.ಸಿ. ನೋಡದೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಒಂದಿಲ್ಲೊಂದು ಸಮಸ್ಯೆ ಇರುವ ಕಾವೇರಿ ತಂತ್ರಾಂಶದಿಂದ ಬೇಸತ್ತ ಜನರು ಕಂದಾಯ ಇಲಾಖೆಗೆ ಹಿಡಿಶಾಪವಾಗುತ್ತಿದ್ದಾರೆ.